ಐವರು ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶ

ಬೆಂಗಳೂರು, ಜೂ. 2: ಜೂನ್ 14ರಿಂದ ಜಾರಿಗೆ ಬರುವಂತೆ ಐವರು ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಅವರು ನೋಟಿಫಿಕೇಶನ್ ಹೊರಡಿಸಿದ್ದಾರೆ.
ಕರ್ನಾಟಕ ನ್ಯಾಯಾಂಗ ಅಕಾಡಮಿ ನಿರ್ದೇಶಕರಾಗಿರುವ ಪ್ರಭಾವತಿ ಎಂ ಹಿರೇಮಠ ಅವರು ಬೆಂಗಳೂರಿನ ಸಣ್ಣ ಪ್ರಕರಣಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆ ಆಗಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‍ನಿಂದ ವರ್ಗವಾಗಿ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮಚಂದ್ರ ಡಿ. ಹುದ್ದರ್ ಅವರನ್ನು ಬೆಂಗಳೂರಿನಲ್ಲಿರುವ ನ್ಯಾಯಾಂಗ ಅಕಾಡಮಿ ನಿರ್ದೇಶಕ ಹುದ್ದೆಗೆ ವರ್ಗ ಮಾಡಲಾಗಿದೆ.
ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಮ್. ಎನ್. ರಘುನಾಥ್ ಅವರನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‍ಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ 81ನೆ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ತ್ಯಾಗರಾಜ್ ಇನವಳ್ಳಿ ಅವರನ್ನು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‍ಗೆ ವರ್ಗಾಯಿಸಲಾಗಿದೆ.
ಶಿವಮೊಗ್ಗದ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ರಾಯಚೂರಿನ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಆರ್.ನಾಗರಾಜ ಅವರನ್ನು ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಇಬ್ಬರು ನ್ಯಾಯಾಧೀಶರ ವರ್ಗಾವಣೆ ರದ್ದು: ಕಳೆದ ಮೇ 5 ರಂದು ಹೊರಡಿಸಿದ್ದ ಆದೇಶದಂತೆ ಕೆಲವು ನ್ಯಾಯಾಧೀಶರು ವರ್ಗಾವಣೆಗೊಳ್ಳಬೇಕಿದ್ದು, ಇದೀಗ ಆ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಅದರಂತೆ, ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಜಿ. ಬಸವರಾಜ್ ಅವರನ್ನು ಬೆಂಗಳೂರಿನ ಸಣ್ಣ ಪ್ರಕರಣಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಿದ್ದ ಕ್ರಮ ರದ್ದಾಗಿದೆ. ಅಂತೆಯೇ ರಾಮನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಜಿ.ರಮಾ ಅವರನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಿದ್ದ ಆದೇಶವೂ ರದ್ದಾಗಿದೆ.







