ಬೆಂಕಿ ಅಪಘಾತದಲ್ಲಿ ಇರಾನ್ ನೌಕಾಪಡೆಯ ಹಡಗು ಮುಳುಗಡೆ

ಟೆಹರಾನ್ (ಇರಾನ್), ಜೂ. 2: ಇರಾನ್ನ ನೌಕಾಪಡೆ ಹಡಗೊಂದಕ್ಕೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಪ್ರಯತ್ನ ವಿಫಲವಾಗಿದ್ದು, ಅದು ಬುಧವಾರ ಒಮಾನ್ ಕೊಲ್ಲಿಯಲ್ಲಿ ಮುಳುಗಿದೆ ಎಂದು ನೌಕಾಪಡೆ ತಿಳಿಸಿದೆ. ಅದರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಜಸ್ಕ್ ಬಂದರಿನ ಸಮೀಪ ಒಮಾನ್ ಕೊಲ್ಲಿಯಲ್ಲಿ ನೌಕಾಪಡೆಯ ನೌಕೆಗಳಿಗೆ ಸಾಮಾಗ್ರಿಗಳನ್ನು ಮರುಪೂರೈಕೆ ಮಾಡುವ ಹಡಗು ‘ಖರ್ಗ್’ಗೆ ಮಂಗಳವಾರ ಬೆಂಕಿ ಹೊತ್ತಿಕೊಂಡಿತ್ತು.
ಬೆಂಕಿಯನ್ನು ನಂದಿಸುವ ಕಾರ್ಯ 20 ಗಂಟೆಗಳ ಕಾಲ ನಡೆಯಿತು. ಆದರೆ, ಅದು ಫಲಕಾರಿಯಾಗದೆ ಹಡಗು ಸಮುದ್ರದಲ್ಲಿ ಮುಳುಗಿತು ಎಂದು ಇರಾನ್ ನೌಕಾಪಡೆ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
ಅಂತರ್ರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆಯಲಿದ್ದ ‘ತರಬೇತಿ ಕಾರ್ಯಕ್ರಮ’ದಲ್ಲಿ ಭಾಗವಹಿಸುವುದಕ್ಕಾಗಿ ಹಡಗು ಹೋಗುತ್ತಿತ್ತು.
ಕಳೆದ ವರ್ಷ ಜಸ್ಕ್ ಕರಾವಳಿಯಲ್ಲಿ ನಡೆದ ಇರಾನ್ ನೌಕಾ ಪಡೆಯ ಅಭ್ಯಾಸದ ವೇಳೆ, ಆಕಸ್ಮಿಕ ದಾಳಿಯಲ್ಲಿ ನೌಕೆಯೊಂದು ಜಖಂ ಆಗಿದ್ದು 19 ನಾವಿಕರು ಮೃತಪಟ್ಟಿದ್ದರು. ನೌಕಾಭ್ಯಾಸದಲ್ಲಿ ಭಾಗವಹಿಸಿದ್ದ ಇನ್ನೊಂದು ಹಡಗಿನಿಂದ ತಪ್ಪಾಗಿ ದಾಳಿ ನಡೆದಿತ್ತು.





