2.12 ಬಿಲಿಯ ಡಾಲರ್ ಪರಿಹಾರ ಪ್ರಶ್ನಿಸಿ ಜಾನ್ಸನ್ ಕಂಪೆನಿ ಅರ್ಜಿ: ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಕಾರ
ವಾಶಿಂಗ್ಟನ್, ಜೂ. 2: ಸಂತ್ರಸ್ತ ಮಹಿಳೆಯರಿಗೆ 2.12 ಬಿಲಿಯ ಡಾಲರ್ (ಸುಮಾರು 15,500 ಕೋಟಿ ರೂಪಾಯಿ) ಪರಿಹಾರ ನೀಡಬೇಕೆಂಬ ಕಿರಿಯ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ಜಾನ್ಸನ್ ಮತ್ತು ಜಾನ್ಸನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಅಮೆರಿಕದ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಜಾನ್ಸನ್ ಮತ್ತು ಜಾನ್ಸನ್ ಕಂಪೆನಿಯ ಮಕ್ಕಳ ಪೌಡರ್ ಮತ್ತು ಇತರ ಉತ್ಪನ್ನಗಳಲ್ಲಿದ್ದ ಆ್ಯಸ್ಬೆಸ್ಟೋಸ್ ತಮ್ಮ ಅಂಡಾಶಯದ ಕ್ಯಾನ್ಸರ್ ಗೆ ಕಾರಣ ಎಂಬುದಾಗಿ ಈ ಮಹಿಳೆಯರು ಆರೋಪಿಸಿದ್ದಾರೆ.
ಜಾನ್ಸನ್ ಮತ್ತು ಜಾನ್ಸನ್ ಕಂಪೆನಿಯ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, 22 ಮಹಿಳೆಯರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಮಿಝೂರಿ ರಾಜ್ಯದ ನ್ಯಯಾಲಯವು ನೀಡಿರುವ ತೀರ್ಪು ಅಸ್ತಿತ್ವದಲ್ಲಿರುತ್ತದೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಪರಿಹಾರ ನೀಡಬೇಕೆಂಬ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ಜಾನ್ಸನ್ ಮತ್ತು ಜಾನ್ಸನ್ ಕಳೆದ ವರ್ಷ ಸಲ್ಲಿಸಿದ ಮೇಲ್ಮನವಿಯನ್ನು ಮಿಝೂರಿ ಮೇಲ್ಮನವಿ ನ್ಯಾಯಾಲಯವು ತಿರಸ್ಕರಿಸಿತ್ತು. ಆದರೆ ಪರಿಹಾರ ಮೊತ್ತವನ್ನು ಮೂಲ ತೀರ್ಪಿನಲ್ಲಿದ್ದ 4.69 ಬಿಲಿಯ ಡಾಲರ್ (ಸುಮಾರು 34,300 ಕೋಟಿ ರೂಪಾಯಿ)ನಿಂದ 2.12 ಬಿಲಿಯ ಡಾಲರ್ಗೆ ಇಳಿಸಿತ್ತು.





