ಕೋವಿಡ್-19 ಲಸಿಕೆಗಳ ಪೇಟೆಂಟ್ ನ ತಾತ್ಕಾಲಿಕ ರದ್ದತಿ ಪ್ರಸ್ತಾವಕ್ಕೆ ‘ಬ್ರಿಕ್ಸ್’ ಬೆಂಬಲ

ಹೊಸದಿಲ್ಲಿ, ಜೂ. 2: ಕೋವಿಡ್-19 ಲಸಿಕೆಗಳ ಮೇಲಿನ ಪೇಟೆಂಟ್ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು ಎಂಬ ಭಾರತ ಮತ್ತು ದಕ್ಷಿಣ ಆಫ್ರಿಕಗಳ ಪ್ರಸ್ತಾವಕ್ಕೆ ಐದು ದೇಶಗಳ ಸಂಘಟನೆಯಾಗಿರುವ ‘ಬ್ರಿಕ್ಸ್’ (ಬ್ರೆಝಿಲ್-ರಶ್ಯ-ಭಾರತ-ಚೀನಾ-ದಕ್ಷಿಣ ಆಫ್ರಿಕ) ಮಂಗಳವಾರ ಬೆಂಬಲ ನೀಡಿದೆ. ಅದೇ ವೇಳೆ, ಲಸಿಕೆಗಳು ಎಲ್ಲರಿಗೂ ಸಿಗಬೇಕು ಮತ್ತು ಸಮಾನ ವಿತರಣೆಯಾಗಬೇಕು ಹಾಗೂ ಅವುಗಳ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಇರಬೇಕು ಎಂದು ಪ್ರತಿಪಾದಿಸಿದೆ.
ಕೊರೋನ ವೈರಸ್ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ವೈದ್ಯಕೀಯ ಉತ್ಪನ್ನಗಳ ಪೂರೈಕೆ ಜಾಲವನ್ನು ಸುಧಾರಿಸಲು ತಂತ್ರಜ್ಞಾನದ ಹಂಚಿಕೆಯಾಗಬೇಕು ಎನ್ನುವುದು ಸೇರಿದಂತೆ ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುವ ವಿಧಾನಗಳ ಬಗ್ಗೆ ಬ್ರಿಕ್ಸ್ ವಿದೇಶ ಸಚಿವರ ಅನ್ಲೈನ್ ಸಮಾವೇಶದಲ್ಲಿ ಚರ್ಚಿಸಲಾಯಿತು.
ಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಕೋವಿಡ್-19 ಲಸಿಕೆಗಳ ಕ್ಷಿಪ್ರ ಅಭಿವೃದ್ಧಿ ಮತ್ತು ಪೂರೈಕೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಸಮಾವೇಶವು ಮನಗಂಡಿತು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಭಾಗೀದಾರರ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿತು.
ಬ್ರಿಕ್ಸ್ ಸಂಘಟನೆಯ 2021ರ ಸಾಲಿಗೆ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತವು ಈ ಆನ್ಲೈನ್ ಸಮಾವೇಶವನ್ನು ಏರ್ಪಡಿಸಿದೆ. ಚೀನಾದ ವಿದೇಶ ಸಚಿವ ವಾಂಗ್ ಯಿ, ರಶ್ಯದ ವಿದೇಶ ಸಚಿವ ಸರ್ಗಿ ಲವ್ರೊವ್, ದಕ್ಷಿಣ ಆಫ್ರಿಕದ ಅಂತರ್ರಾಷ್ಟ್ರೀಯ ಸಂಬಂಧಗಳ ಸಚಿವೆ ಗ್ರೇಸ್ ನಲೇಡಿ ಮಂಡಿಸ ಪಾಂಡೊರ್ ಮತ್ತು ಬ್ರೆಝಿಲ್ ವಿದೇಶ ಸಚಿವ ಕಾರ್ಲೋಸ್ ಆಲ್ಬರ್ಟೊ ಫ್ರಾಂಕೊ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.