ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪರೀಕ್ಷಾರ್ಥ ಪ್ರಯೋಗ ಆರಂಭ

ಪಾಟ್ನಾ, ಜೂ.3: ಭಾರತ್ ಬಯೋಟೆಕ್ ಉತ್ಪಾದಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು ಪರೀಕ್ಷಾರ್ಥವಾಗಿ ಮಕ್ಕಳ ಮೇಲೆ ಪ್ರಯೋಗ ಮಾಡುವ ಪ್ರಕ್ರಿಯೆ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ನಲ್ಲಿ ಆರಂಭವಾಗಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಮೇ 11ರಂದು ಅನುಮತಿ ನೀಡಿತ್ತು.
ಎರಡರಿಂದ ಹದಿನೆಂಟು ವರ್ಷದ ನಡುವಿನ ಮಕ್ಕಳಿಗೆ ಕೊವ್ಯಾಕ್ಸಿನ್ ಪ್ರಯೋಗಿಸುವ 2 ಮತ್ತು 3ನೇ ಹಂತದ ಕ್ಲಿನಿಕಲ್ ಪರೀಕ್ಷೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಒಪ್ಪಿಗೆ ನೀಡಿದ್ದಾರೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ.ಪಾಲ್ ಪ್ರಕಟಿಸಿದ್ದರು. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಭಾರತ ಕಳೆದ ಜನವರಿಯಲ್ಲಿ ಚಾಲನೆ ನೀಡಿತ್ತು. ಮೊದಲಿಗೆ ಆರೋಗ್ಯ ಕಾರ್ಯಕರ್ತರು ಹಾಗೂ ಫೆಬ್ರವರಿ 2ರಿಂದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ ಆರಂಭಿಸಲಾಗಿತ್ತು.
ಮುಂದಿನ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ಸಹ ಅಸ್ವಸ್ಥತೆ ಇರುವ 45 ವರ್ಷ ಮೇಲ್ಪಟ್ಟವರಿಗೆ ಮಾರ್ಚ್ 1ರಿಂದ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಎಪ್ರಿಲ್ 1ರಿಂದ ಲಸಿಕೆ ನೀಡಿಕೆ ಆರಂಭಿಸಲಾಗಿತ್ತು. ಮೇ 1ರಿಂದ 18-44 ವಯೋಮಿತಿಯವರಿಗೂ ಲಸಿಕೆ ನೀಡಿಕೆ ಆರಂಭಿಸಲಾಗಿತ್ತಾದರೂ, ಲಸಿಕೆ ಕೊರತೆಯಿಂದ ಅಭಿಯಾನ ಕುಂಠಿತವಾಗಿದೆ.
ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ನೀಡಲಾಗುತ್ತಿದೆ.