ಬಂಧಿತ ಕ್ರಿಮಿನಲ್ ಪರಾರಿಗೆ ಸಹಕರಿಸಿದ ಆರೋಪ; ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

Photo: ndtv
ಕಾನ್ಪುರ್ : ಕುಖ್ಯಾತ ಕ್ರಿಮಿನಲ್ ಒಬ್ಬನನ್ನು ಪೊಲೀಸರು ಬಂಧಿಸಿದ ನಂತರ ಆತ ಪರಾರಿಯಾಗಲು ಸಹಕರಿಸಿದ್ದಾರೆಂಬ ಆರೋಪದಲ್ಲಿ ಸ್ಥಳೀಯ ಬಿಜೆಪಿ ನಾಯಕ ಮತ್ತು ಅವರ ಬೆಂಬಲಿಗರ ವಿರುದ್ಧ ಕಾನ್ಪುರ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಸುಮಾರು ಎರಡು ಡಜನಿಗೂ ಅಧಿಕ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್ ಮನೋಜ್ ಸಿಂಗ್ ಎಂಬಾತನನ್ನು ಪೊಲೀಸರು ಬುಧವಾರ ಬಂಧಿಸಿದ ಬೆನ್ನಲ್ಲೇ ಸ್ಥಳೀಯ ಬಿಜೆಪಿ ನಾಯಕ ನಾರಾಯಣ್ ಸಿಂಗ್ ಭದೌರಿಯಾ ಸಹಿತ ಬಂಧಿತನ ಹಲವಾರು ಬೆಂಬಲಿಗರು ಆತ ತಪ್ಪಿಸಲು ಸಹಕರಿಸಿದ್ದರೆನ್ನಲಾಗಿದೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಮನೋಜ್ ಸಿಂಗ್, ನೌಬಾಸ್ತ ಎಂಬಲ್ಲಿ ನಾರಾಯಣ್ ಸಿಂಗ್ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಪಾರ್ಟಿ ನಡೆಯುತ್ತಿದ್ದ ಅತಿಥಿ ಗೃಹಕ್ಕೆ ದಾಳಿ ನಡೆಸಿದ್ದರು. ಆಗ ಹತ್ತಿರದ ಪಾನ್ ಅಂಗಡಿಯಲ್ಲಿದ್ದ ಸಿಂಗ್ನನ್ನು ಬಂಧಿಸಲಾಯಿತು.
ಆದರೆ ಅಷ್ಟೊತ್ತಿಗಾಗಿ ಆತನ ಹಲವಾರು ಬೆಂಬಲಿಗರು ರಂಪಾಟ ಸೃಷ್ಟಿಸಿದ್ದರಲ್ಲದೆ ಪೊಲೀಸರೊಂದಿಗೆ ದುರ್ನಡತೆ ತೋರಿದ್ದರು. ಅಷ್ಟೇ ಅಲ್ಲದೆ ಪೊಲೀಸರ ಗಮನ ಬೇರೆಡೆಗೆ ಸೆಳೆದು ಬಂಧಿತ ಪರಾರಿಯಾಗುವಂತೆ ಸಹಕರಿಸಿದ್ದರು. ಈ ಘಟನೆ ಕುರಿತ ವೀಡಿಯೋದಲ್ಲಿ ಬಿಜೆಪಿ ನಾಯಕ ಭದೌರಿಯಾ ಕೂಡ ಕಂಡು ಬಂದಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭದೌರಿಯಾ ಒಬ್ಬ ಬಿಜೆಪಿ ನಾಯಕನೆಂದು ಕಾನ್ಪುರ್ ದಕ್ಷಿಣ ಘಟಕದ ಅಧ್ಯಕ್ಷ ಬಾನ ಆರ್ಯ ದೃಢೀಕರಿಸಿದ್ದಾರಲ್ಲದೆ ಅದೇ ಸಮಯ ಆ ಪಾರ್ಟಿಯಲ್ಲಿ ಪಕ್ಷದ ಇತರ ಯಾರೂ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.