ಉಳ್ಳಾಲ: ಬಿ.ಎಂ. ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಿಂದ ರೇಶನ್ ಕಿಟ್ ವಿತರಣೆ

ಉಳ್ಳಾಲ, ಜೂ.3: ಬಿ.ಎಂ. ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ವತಿಯಿಂದ ಮೊದಲ ಹಂತದಲ್ಲಿ ಸುಮಾರು 26 ಮಂದಿಗೆ ರೇಶನ್ ಕಿಟ್ ಅನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಬಿ.ಎಂ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಯವಂತಿ ಸೋನ್ಸ್, ''ಲಾಕ್ ಡೌನ್ ಪ್ರಯುಕ್ತ ನಮ್ಮ ಶಾಲೆಗೆ ಏನಾದರೂ ಮಾಡಬೇಕು ಎನ್ನುವ ಕುರಿತು ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳು ಇರುವ ವಾಟ್ಸಪ್ ಗ್ರೂಪ್ ನಲ್ಲಿ ಚರ್ಚೆ ನಡೆದು ಶಾಲೆಯಲ್ಲಿ ಈಗ ಕಲಿಯುತ್ತಿರುವ ಕೆಲವು ಅರ್ಹ ವಿದ್ಯಾರ್ಥಿಗಳಿಗೆ ಮೊದಲ ಹಂತದ ರೇಶನ್ ಕಿಟ್ ಕೊಡಲು ಮಕ್ಕಳು ತೀರ್ಮಾನಿಸಿದರು. ನಾವು ಅದಕ್ಕೆ ಬೆಂಬಲವನ್ನು ನೀಡಿದೆವು. ಇಂತಹ ರಚನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿರುವ ನನ್ನೆಲ್ಲಾ ಹಳೆ ವಿದ್ಯಾರ್ಥಿಗಳಿಗೆ ದೇವರು ಅನುಗ್ರಹಿಸಲಿ. ಮುಂದೆಯೂ ಶಾಲೆಯ ಅಭಿವೃದ್ಧಿಯ ಬಗ್ಗೆ ಕಾರ್ಯಪ್ರವೃತ್ತರಾಗಲು ಇದು ಪ್ರೇರಣೆಯಾಗಲಿ" ಎಂದು ಹೇಳಿದರು.
"ಈ ಶಾಲೆ ನಮಗೆ ತುಂಬಾ ಕೊಟ್ಟಿದೆ. ಶಿಕ್ಷಣ, ಬಿಸಿಯೂಟ, ಸಮವಸ್ತ್ರ, ತರಬೇತಿ ಎಲ್ಲವೂ ನೀಡಿದೆ. ಇಂದು ನಾವು ಜೀವನದಲ್ಲಿ ಏನಾದರೂ ಸಾಧಿಸಿದ್ದರೆ ಅದರಲ್ಲಿ ಬಿ.ಎಂ. ಶಾಲೆಯ ಪಾತ್ರ ಮಹತ್ತರವಾದುದು. ರೇಶನ್ ಕಿಟ್ ಸಹಾಯವಲ್ಲ, ಇದು ನಮ್ಮ ಕರ್ತವ್ಯವಾಗಿದೆ" ಎಂದು ಬಿ.ಎಂ. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಡಿಸೋಜ ಮತ್ತು ರೇಶನ್ ಕಿಟ್ ಕಾರ್ಯಕ್ರಮ ಸಂಚಾಲಕ ಶೌಕತ್ ಅಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕಿ ಉಷಾ.ಎಂ, ಅಟೆಂಡರ್ ವೆಸ್ಲಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಇಮ್ರಾನ್ ಉಳ್ಳಾಲ್ ಮತ್ತು ಲತೀಶ್ ಉಳ್ಳಾಲ್ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾರವರು ಧನ್ಯವಾದ ಸಲ್ಲಿಸಿದರು.








