ತನ್ನನ್ನು ತಾರತಮ್ಯದಿಂದ ನೋಡುತ್ತಿದ್ದ ಸೊಸೆಯನ್ನು ಅಪ್ಪಿಕೊಂಡು ಕೊರೋನ ಹರಡಿದ ಅತ್ತೆ!

ಸಾಂದರ್ಭಿಕ ಚಿತ್ರ
ಹೈದರಾಬಾದ್: ಕೋವಿಡ್ -19 ಸೋಂಕಿತ ವೃದ್ಧ ಮಹಿಳೆಯೊಬ್ಬರು ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಸೊಸೆಯೊಂದಿಗೆ ಮುನಿಸಿಕೊಂಡಿದ್ದಲ್ಲದೆ, ಸೊಸೆಯನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಸೊಸೆಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಸೊಸೆ ಸೋಂಕಿಗೆ ಒಳಗಾದ ನಂತರ, ಸೊಮರಿಪೆಟಾ ಗ್ರಾಮದಲ್ಲಿರುವ ಗಂಡನ ಮನೆಯಿಂದ ಹೊರ ಹಾಕಲಾಗಿದೆ ಎಂದು ವರದಿಯಾಗಿದೆ. ಇದನ್ನು ತಿಳಿದ ಆಕೆಯ ಸಹೋದರಿ ಮೇ 29 ರಂದು ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿರುವ ಹೆತ್ತವರ ಮನೆಗೆ ಕರೆತಂದಿದ್ದಾಳೆ ಎಂದು ತಿಳಿದುಬಂದಿದೆ.
"ನಾನು ಕೋವಿಡ್ -19 ಸೋಂಕಿಗೆ ಒಳಗಾಗಬೇಕು ಎಂದು ನನ್ನ ಅತ್ತೆ ನನ್ನನ್ನು ತಬ್ಬಿಕೊಂಡರು" ಎಂದು ಮಹಿಳೆ ಮೇ 31 ರಂದು ವೀಡಿಯೊ ಸಂದರ್ಶನದಲ್ಲಿ ತನ್ನನ್ನು ಭೇಟಿ ಮಾಡಿದ ಆರೋಗ್ಯ ಅಧಿಕಾರಿಗಳಿಗೆ ದೂರಿದ್ದಾಳೆ.
ತಾನು ಕೊರೋನ ಸೋಂಕಿಗೆ ಒಳಗಾದ ಬಳಿಕ ಸೊಸೆಯ ವರ್ತನೆಯಲ್ಲಿ ದಿಢೀರ್ ಬದಲಾಗಿದ್ದನ್ನು ಅತ್ತೆ ಗಮನಿಸಿದ್ದರು. ಸೊಸೆ ತನ್ನ ಇಬ್ಬರು ಮಕ್ಕಳನ್ನು ಅತ್ತೆಯ ಬಳಿ ಹೋಗಲು ಬಿಡುತ್ತಿರಲಿಲ್ಲ. ದೂರದಿಂದ ನಿಂತು ಆಹಾರವನ್ನು ನೀಡಿ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ವಯಸ್ಸಾದ ಮಹಿಳೆ ತಾರತಮ್ಯ ಹಾಗೂ ನೋವನ್ನು ಅನುಭವಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ನಾನು ಸತ್ತ ಮೇಲೆ ನೀವೆಲ್ಲರೂ ಸಂತೋಷದಿಂದ ಬದುಕಲು ಬಯಸುವಿರಾ?" ಎಂದು ಹೇಳಿದ್ದ ವೃದ್ಧ ಮಹಿಳೆ ಏಕಾಏಕಿ ತನ್ನ ಸೊಸೆಯನ್ನು ತಬ್ಬಿಕೊಂಡಿದ್ದಾಳೆ ಎಂದು ವರದಿಯಾಗಿದೆ.