ರೋಹಿಣಿ ಸಿಂಧೂರಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿ ಐಎಎಸ್ ಹುದ್ದೆಗೆ ರಾಜೀನಾಮೆ ಘೋಷಿಸಿದ ಶಿಲ್ಪಾನಾಗ್
ಇಂತಹ ಜಿಲ್ಲಾಧಿಕಾರಿ ಯಾವ ಜಿಲ್ಲೆಗೂ ಸಿಗಬಾರದು ಎಂದ ಮೈಸೂರು ಪಾಲಿಕೆ ಆಯುಕ್ತೆ

ಮೈಸೂರು,ಜೂ.3: ರೋಹಿಣಿ ಸಿಂಧೂರಿ ಅವರು ತಮ್ಮ ಅಹಂನಿಂದ ನಗರವನ್ನು ಬಲಿ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.
ನಗರದ ಪಾಲಿಕೆ ಅವರಣದಲ್ಲಿ ಗುರುವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿದ್ದರೂ ನಮ್ಮನ್ನೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಟಾರ್ಗೆಟ್ ಮಾಡುತ್ತಿದ್ದಾರೆ. ಹಾಗಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಿರುವುದಾಗಿ ತಿಳಿಸಿದರು.
ಇಂತಹ ಡಿಸಿ ಯಾವ ಜಿಲ್ಲೆಗೂ ಸಿಗಬಾರದು. ರೋಹಿಣಿ ಸಿಂಧೂರಿ ಅವರು ತಮ್ಮ ಅಹಂನಿಂದ ನಗರವನ್ನು ಬಲಿ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಗರ ಪ್ರದೇಶಕ್ಕೆ ಒಂದು ಮಾನದಂಡ, ಗ್ರಾಮೀಣ ಪ್ರದೇಶಕ್ಕೆ ಒಂದು ಮಾನದಂಡ ನೀಡಲಾಗುತ್ತಿದೆ. ಸೂಕ್ತವಾಗಿ ಕೊರೋನ ನಿರ್ವಹಣೆ ಮಾಡಿದರೂ, ಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸಲಾಗುತ್ತಿದೆ. ಡಿಸಿ ಅವರು ಪಾಲಿಕೆ ವಿರುದ್ಧ ಸಮರ ಸಾರುತ್ತಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲರಾಗಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಅವರು ಸಿಎಸ್ಆರ್ ಫಂಡ್ ನಿಂದ ದೇಣಿಗೆ ಪಡೆಯದಂತೆ ಒತ್ತಡ ಹಾಕುತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ನನಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ವೈಯಕ್ತಿಕ ದ್ವೇಷ ಇದ್ದರೆ ನನ್ನ ಮೇಲೆ ತೀರಿಸಿಕೊಳ್ಳಲಿ. ಅದನ್ನು ಬಿಟ್ಟು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಮೈಸೂರು ಜನತೆಗೆ ಅವಮಾನ ಮಾಡುವುದು ಬೇಡ. ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಹಾಗಾಗಿ ಐಎಎಸ್ ಹುದ್ದೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದರಿಂದ ಯಾರಿಗೆ ಸಂತೋಷ ಆಗುತ್ತೊ ಆಗಲಿ. ಮೈಸೂರು ಜನತೆ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಬಗ್ಗೆ ಅಪಪ್ರಚಾರ ಮಾಡಿ ನಿರಂತರವಾಗಿ ಅವಮಾನ ಮಾಡುತ್ತಿದ್ದಾರೆ. ಹಾಗಾಗಿ ಬಹಳ ನೋವಿನಿಂದ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಕಣ್ಣೀರಿಟ್ಟರು.







