ಕುಂದಾಪುರ: ಗೊಂದಲದ ಗೂಡಾಗಿರುವ ಲಸಿಕಾ ಕೇಂದ್ರ

ಕುಂದಾಪುರ, ಜೂ.3: ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಿರುವ ಲಸಿಕೆಯನ್ನು ನೀಡಲು ನಗರದಲ್ಲಿ ತೆರೆದಿರುವ ಕುಂದಾಪುರ ಕಲಾಮಂದಿರದ ಲಸಿಕಾ ಕೇಂದ್ರದಲ್ಲಿ ಇದೀಗ ಸಮಾಜ ಸೇವೆಯ ಸೋಗಿನಲ್ಲಿ ರಾಜಕೀಯ ತಾಂಡ ವವಾಡುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಲಸಿಕೆ ಹಾಕಿಸಿಕೊಳ್ಳಲು ಬೆಳ್ಳಂಬೆಳಗ್ಗೆ ದೂರದಿಂದ ಬಂದು ತಮ್ಮ ಸರತಿಗಾಗಿ ಸಂಜೆ ತನಕ ಕಾದಿದ್ದರೂ, ಕೇಂದ್ರದಲ್ಲಿ ಕಾಣಿಸಿಕೊಳ್ಳುವ ಪುಢಾರಿ ಗಳಿಂದಾಗಿ ಲಸಿಕೆ ಲಭ್ಯವಾಗದೆ, ಜನಸಾಮಾನ್ಯರು ಹಿಡಿಶಾಪ ಹಾಕುತ್ತಾ ಹಿಂದಿರುಗಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಜನರು ದೂರುತಿದ್ದಾರೆ.
ಲಸಿಕಾ ಕೇಂದ್ರದಲ್ಲಿ ಅದಾಗಲೇ ತಳವೂರಿರುವ ಎರಡನೇ ಹಂತದ ರಾಜಕಾರಣಿಗಳು, ಜನಪ್ರತಿನಿಧಿಗಳ ಹಿಂಬಾಲಕರು, ಸುಖಾಸುಮ್ಮನೆ ತಮ್ಮ ಹೆಸರನ್ನು ನೋಂದಾಯಿಸಿ, ಲಸಿಕೆ ನೀಡಿಕೆಯ ಆರಂಭದ ಹಲವು ಸಂಖ್ಯೆಗಳನ್ನು ಅಥವಾ ಟೋಕನ್‌ಗಳನ್ನು ಕಾದಿರಿಸುತ್ತಾರೆ. ನಂತರ ತಮ್ಮ ಚೇಲಾಗಳು ಎಷ್ಟು ತಡವಾಗಿ ಬಂದರೂ ಸರಿ ಅವರು ಆ ಕೂಡಲೇ ಲಸಿಕೆ ಪಡೆಯುವಂತೆ ಮಾಡಿ ತಮ್ಮ ಪ್ರಭಾವವನ್ನು ತೋರ್ಪಡಿಸುವ ಜಿದ್ದಿಗೆ ಬಿದ್ದಿದ್ದಾರೆ.
ಇದು ಸಹಜವಾಗಿ ಬೆಳಿಗ್ಗೆಯಿಂದ ಲಸಿಕೆಗಾಗಿ ಕಾದು ಕಾದು ಹೈರಾಣಾಗಿರುವ ಸಾಮಾನ್ಯ ನಾಗರಿಕರು ಕೆರಳುವಂತೆ ಮಾಡುತ್ತಿದೆ. ಇದರ ಬಗ್ಗೆ ಯಾರಾದರೂ ವಿಚಾರಿಸಲು ಮುಂದಾದರೆ, ಜಿದ್ದಿಗೆ ಬಿದ್ದಂತೆ ಜಗಳಕ್ಕೆ ನಿಲ್ಲುತ್ತಾರೆ. ಕೆಲವು ಪುಢಾರಿಗಳ ಇಂಥ ವರ್ತನೆ ಲಸಿಕೆ ಪಡೆಯಲು ಸರತಿಯಲ್ಲಿ ನಿಂತಿರುವ ಸಾರ್ವಜನಿಕರನ್ನು ಇನ್ನಷ್ಟು ರೊಚ್ಚಿಗೇಳುವಂತೆ ಮಾಡುತ್ತಿದೆ. ಹೀಗಾಗಿ ಇಲ್ಲಿ ಪ್ರತಿದಿನ ಮಾತಿನ ಚಕಮಕಿ ಸಾಮಾನ್ಯ ವೆಂಬಂತಾಗಿದೆ.
ಲಸಿಕಾ ಕೇಂದ್ರದ ಅಸರ್ಮಪಕ ಕ್ರಮಗಳನ್ನು ಸಮಾಜ ಸೇವೆಯ ಹೆಸರಿನಲ್ಲಿ ಬಳಸಿಕೊಳ್ಳುತ್ತಿರುವ ಇವರು ತಮ್ಮ ಪಕ್ಷದವರಿಗೆ, ತಮ್ಮ ಹಿಂಬಾ ಲಕರಿಗೆ ಲಸಿಕೆ ಕೊಡಿಸುವಲ್ಲಿ ಸ್ಪರ್ಧೆಗೆ ಬಿದ್ದಂತೆ ವರ್ತಿಸುತಿದ್ದಾರೆ ಎಂದು ರೋಷತ್ತ ಜನಸಾಮಾನ್ಯರು ದೂರುತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಡಳಿತ ಲಸಿಕಾ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆ ಯರನ್ನೋ, ಶಿಕ್ಷಕರನ್ನೋ ಅಥವಾ ಇನ್ನಿತರ ಅಧಿಕಾರಿಗಳನ್ನು ಕ್ರಮ ಬದ್ಧವಾಗಿ ಸೇವೆಗೆ ನಿಯುಕ್ತಿಗೊಳಿಸಿ, ವಾಕ್ಸಿನ್ ಕೇಂದ್ರದಲ್ಲೂ ಠಿಕಾಣಿ ಹೂಡಿ ತಮ್ಮ ರಾಜಕೀಯ ವೈರಸ್‌ಗಳನ್ನು ಪಸರಿಸುತ್ತಿರುವವರಿಗೆ ಕೂಡಲೇ ಕಡಿವಾಣ ಹಾಕಬೆೀಕೆಂಬ ಆಗ್ರಹ ಎಲ್ಲಡೆ ಕೇಳಿಬರುತ್ತಿದೆ.







