ಉಡುಪಿ ಜಿಲ್ಲೆಯ ಇನ್ನೂ 7 ಗ್ರಾಪಂಗಳಲ್ಲಿ ಸಂಪೂರ್ಣ ಲಾಕ್‌ಡೌನ್ : ಜಿಲ್ಲಾಡಳಿತ
33 ಗ್ರಾಪಂಗಳಲ್ಲಿ ಜನರಿಂದ ಉತ್ತಮ ಸ್ಪಂದನೆ

ಉಡುಪಿ, ಜೂ.3: ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿಯನ್ನು ಪರಿಣಾ ಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಮ ಪಂಚಾಯತ್‌ಗಳನ್ನು ಸಂಪೂರ್ಣ ಲಾಕ್‌ಡೌನ್‌ಗೊಳಿಸುವ ಜಿಲ್ಲಾಡಳಿತದ ಪ್ರಯತ್ನವಾಗಿ ಜೂ. 4ರಿಂದ ಇನ್ನೂ ಏಳು ಗ್ರಾಪಂಗಳನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಜಿಲ್ಲೆಯ ಏಳು ತಾಲೂಕುಗಳ ಒಟ್ಟು 33 ಗ್ರಾಪಂಗಳನ್ನು ನಿನ್ನೆಯಿಂದ ಸಂಪೂರ್ಣ ಲಾಕ್‌ಡೌನ್‌ಗೆ ಒಳಪಡಿಸಲಾಗಿದೆ. ಇದೀಗ 50ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿರುವ ಏಳು ಗ್ರಾಪಂಗಳನ್ನು ಜೂ. 4ರಿಂದ ಈ ಸಾಲಿಗೆ ಸೇರಿಸಲಾಗಿದೆ.
ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಪಂ, ಆವರ್ಸೆ ಗ್ರಾಪಂ ಹಾಗೂ ಹನೆಹಳ್ಳಿ ಗ್ರಾಪಂ, ಕಾರ್ಕಳ ತಾಲೂಕಿನ ಕಲ್ಯ ಗ್ರಾಪಂ, ಕುಂದಾಪುರ ತಾಲೂಕಿನ ತಲ್ಲೂರು ಗ್ರಾಪಂ, ಯಡಮೊಗೆ ಗ್ರಾಪಂ ಹಾಗೂ ಕರ್ಕುಂಜೆ ಗ್ರಾಪಂಗಳು ಹೊಸದಾಗಿ ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾದ ಜಿಲ್ಲೆಯ ಗ್ರಾಪಂಗಳಾಗಿವೆ.
ಈ ಗ್ರಾಪಂಗಳಲ್ಲಿ ಜೂ. 4ರಿಂದ ಬೆಳಗ್ಗೆ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತಿದ್ದು, ಅನಂತರ ಜೂ.7ರ ಬೆಳಗ್ಗೆ 6ಗಂಟೆಯವರೆಗೆ ಇಲ್ಲಿ ಸಂಪೂರ್ಣ ಲಾಕ್‌ಡೌನ್ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಈ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 40 ಗ್ರಾಪಂಗಳು ಲಾಕ್‌ಡೌನ್‌ಗೆ ಒಳಗಾಗಲಿವೆ.
ಜನರಿಂದ ಉತ್ತಮ ಸ್ಪಂದನೆ: ಬುಧವಾರದಿಂದ ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾದ ಜಿಲ್ಲೆಯಲ್ಲಿ 33 ಗ್ರಾಪಂಗಳಲ್ಲಿ ಇಂದೂ ಸಹ ಜನರ ಸಂಪೂರ್ಣ ಸಹಕಾರ ಸಿಕ್ಕಿದೆ. ಎಲ್ಲಾ ಗ್ರಾಪಂಗಳಲ್ಲೂ ಜನರು ಮನೆಯೊಳಗೆ ಇದ್ದು, ಬಂದ್‌ನ್ನು ಯಶಸ್ವಿಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಪ್ರತಿಯೊಂದು ಗ್ರಾಪಂಗಳಲ್ಲೂ ಗ್ರಾಪಂ ಹಾಗೂ ಆಯಾ ಗ್ರಾಪಂಗಳ ಗ್ರಾಮಮಟ್ಟದ ಕಾರ್ಯಪಡೆಗಳು ಜನರ ಅಗತ್ಯಗಳಿಗೆ ಸ್ಪಂಧಿಸಿವೆ. ಅವರ ಯಾವುದೇ ತುರ್ತು ಅಗತ್ಯದ ವಸ್ತುಗಳನ್ನು -ಹಾಲು, ಔಷಧಿ ಹಾಗೂ ಇತರ ವಸ್ತು- ಕಾರ್ಯಪಡೆಗಳು ಆಯಾ ಮನೆಗಳಿಗೆ ತಲುಪಿಸಿವೆ ಎಂದು ಆಯಾ ತಾಲೂಕುಗಳ ತಹಶೀಲ್ದಾರ್‌ರು ತಿಳಿಸಿದ್ದಾರೆ.
ಯಾವುದೇ ಗ್ರಾಪಂಗಳಲ್ಲೂ ಲಾಕ್‌ಡೌನ್‌ನ್ನು ಉಲ್ಲಂಘಿಸಿದ ಘಟನೆಗಳು ವರದಿಯಾಗಿಲ್ಲ. ಬೈಂದೂರಿನ ಐದು ಗ್ರಾಪಂಗಳಲ್ಲಿ ಲಾಕ್‌ಡೌನ್ ಸತತ ಎರಡನೇ ದಿನವೂ ಯಶಸ್ವಿಯಾಗಿ ನಡೆದಿದೆ. ಜನರು ಎಲ್ಲೂ ಮನೆಯಿಂದ ಹೊರಬಂದ ವರದಿಗಳಿಲ್ಲ ಎಂದು ತಶೀಲ್ದಾರ್ ಶೋಭಾಲಕ್ಷ್ಮೀ ತಿಳಿಸಿದರು. 120 ಪಾಸಿಟಿವ್ ಪ್ರಕರಣಗಳಿರುವ ಜಡ್ಕಲ್‌ನಲ್ಲಿ ಜನರ ಉತ್ತಮ ಸ್ಪಂದನೆ ಸಿಕ್ಕಿದೆ ಎಂದವರು ಹೇಳಿದರು.
ಕುಂದಾಪುರ ತಹಶೀಲ್ದಾರ್ ಆನಂದಪ್ಪ ನಾಯಕ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಗೂ ಬ್ರಹ್ಮಾವರದ ತಹಶೀಲ್ದಾರ್ ಕಿರಣ್ ಗೋರಯ್ಯ ಸಹ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಲಾಕ್‌ಡೌನ್ ಯಶಸ್ವಿಯಾಗಿದೆ ಎಂದರು.
ಮೊದಲ ಪಟ್ಟಿಯಲ್ಲಿ ಬ್ರಹ್ಮಾವರ ತಾಲೂಕಿನ 38 ಕಳತ್ತೂರು ಗ್ರಾಪಂ ಮಾತ್ರ ಲಾಕ್‌ಡೌನ್ ಪಟ್ಟಿಯಲ್ಲಿದ್ದು, ನಿನ್ನೆ ಹನೆಹಳ್ಳಿ ಹಾಗೂ ಇಂದು ಕೊಕ್ಕರ್ಣೆ ಮತ್ತು ಆವರ್ಸೆ ಗ್ರಾಪಂಗಳನ್ನು ಸಹ ಲಾಕ್‌ಡೌನ್‌ಗೆ ಶಿಫಾರಸ್ಸು ಮಾಡಲಾಗಿದೆ. ಆವರ್ಸೆಯಲ್ಲಿ 58 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಿಲಿಯಾಣ ಗ್ರಾಮದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದರಿಂದ ಅದರ ನಿಯಂತ್ರಣಕ್ಕೆ ಲಾಕ್‌ಡೌನ್‌ಗೆ ಶಿಫಾರಸ್ಸು ಮಾಡಲಾಗಿದೆ ಎಂದು ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದರು.








