ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್‌ಗೆ ಪರಿವರ್ತನೆ: ಮರು ಪರಿಶೀಲನೆಗೆ ಆಹಾರ ಇಲಾಖೆಯಿಂದ ಅರ್ಜಿ ಅಹ್ವಾನ
ಮಂಗಳೂರು, ಜೂ.3: ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಪಾವತಿದಾರರ ಮಾಹಿತಿಯನ್ನು ರಾಜ್ಯ ಸರಕಾರದ ಆಹಾರ ಇಲಾಖೆಯು ಪಡೆದಿರುವ ಆಧಾರದ ಮೇಲೆ ‘ಆದಾಯ ತೆರಿಗೆ ಪಾವತಿದಾರರು’ ಎಂಬ ನೆಲೆಯಲ್ಲಿ ರಾಜ್ಯಾದ್ಯಂತ ಹಲವು ಕುಟುಂಬಗಳ ಅಂತ್ಯೋದಯ ಅಥವಾ ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್‌ಗೆ ಪರಿವರ್ತನೆ ಹೊಂದಿದೆ. ಈ ಪೈಕಿ ಯಾವುದಾದರೂ ತಾಂತ್ರಿಕ ಅಥವಾ ಇನ್ನಿತರ ಕಾರಣದಿಂದ ನೈಜ ಪ್ರಕರಣಗಳಲ್ಲಿ ಅರ್ಹ ಬಿಪಿಎಲ್ ಕುಟುಂಬಗಳ ಪಡಿತರ ಚೀಟಿಯು ಎಪಿಎಲ್‌ಗೆ ಪರಿವರ್ತನೆಯಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಮರು ಪರಿಶೀಲಿಸಲು ರಾಜ್ಯ ಸರಕಾರ ಆದೇಶಿಸಿದೆ.
ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಯಾವುದಾದರೂ ಕುಟುಂಬಗಳು ನೈಜವಾಗಿ ಸರಕಾರ ನಿಗದಿಪಡಿಸಿರುವ ಬಿಪಿಎಲ್ ಮಾನ ದಂಡಗಳ ವ್ಯಾಪ್ತಿಯ ಒಳಗಡೆಯಿದ್ದು, ಅಂತ್ಯೋದಯ ಅಥವಾ ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಾಗಿದ್ದರೆ, ಅಂತಹವರು ದಾಖಲೆ ಗಳ ಸಮೇತ ಆಹಾರ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದರ ನೈಜತೆಯನ್ನು ಪರಿಶೀಲಿಸಿ ಆದಾಯ ತೆರಿಗೆ ಇಲಾಖೆುಂದ ಸ್ಪಷ್ಟನೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಪ್ರಕಟನೆ ತಿಳಿಸಿದೆ.
ಆದಾಯ ತೆರಿಗೆ ಪಾವತಿದಾರ ಪಟ್ಟಿಯಲ್ಲಿ ಬಂದಿರುವ ಎಪಿಎಲ್‌ಗೆ ಪರಿವರ್ತನೆ ಹೊಂದಿರುವವರು ಅರ್ಜಿಯೊಂದಿಗೆ ಪೂರಕ ಮಾಹಿತಿ, ಪ್ಯಾನ್ ಕಾರ್ಡ್ ಪ್ರತಿ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಆದಾಯ ತೆರಿಗೆ ವರದಿ, ರೇಷನ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮಂಗಳೂರು ನಗರ ಹಾಗೂ ಎಲ್ಲಾ ತಾಲೂಕು ಕಚೇರಿಗಳಲ್ಲಿರುವ ಆಹಾರ ಇಲಾಖೆಗೆ ಮನವಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.







