ಖಾಸಗಿ ಆಸ್ಪತ್ರೆಗಳ ಕೋವಿಡ್ ಲಸಿಕೆ ದಂಧೆ ನಿಲ್ಲಿಸುವಂತೆ 'ಕೆಸಿವಿಟಿ'ಯಿಂದ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು, ಜೂ.3: ಖಾಸಗಿ ಆಸ್ಪತ್ರೆಗಳ ಕೋವಿಡ್ ಲಸಿಕೆ ದಂಧೆ ನಿಲ್ಲಿಸಲು ಮತ್ತು ಸರಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಯೋಜನೆ ರೂಪಿಸುವಂತೆ ಜನಸಹಾಯ-ಕರ್ನಾಟಕ ಕೋವಿಡ್ ವಾಲೆಂಟಿಯರ್ಸ್ ಟೀಮ್ (ಕೆಸಿವಿಟಿ) ದ.ಕ. ಜಿಲ್ಲಾ ಸಂಯೋಜಕ ಉಮರ್ ಯು.ಎಚ್. ದ.ಕ.ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಕೊರೋನ ಸೋಂಕು ಹರಡದಂತೆ ಲಸಿಕೆ ಹಾಕಿಸಿಕೊಳ್ಳಬೇಕು ಎಂಬುದು ತಜ್ಞ ವೈದ್ಯರ ಒಮ್ಮತದ ಸಲಹೆಯಾಗಿದೆ. ದ.ಕ. ಜಿಲ್ಲೆಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಶೇ.90ಕ್ಕಿಂತಲೂ ಅಧಿಕ ಜನರಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ. ಕಳೆದ ವರ್ಷದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಈ ವರ್ಷವೂ ಮುಂದುವರಿಯುತ್ತಿರುವ ಲಾಕ್‌ಡೌನ್‌ಗಳು ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಸರಕಾರಿ ಆಸ್ಪತ್ರೆಗಳಿಗೆ ಕಡಿಮೆ ಸಂಖ್ಯೆಯಲ್ಲಿ ಲಸಿಕೆ ಪೂರೈಕೆಯಾಗುತ್ತಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ಧಾರಾಳವಾಗಿ ಲಸಿಕೆ ಲಭ್ಯವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ ವಿವಿಧ ಖಾಸಗಿ ಆಸ್ಪತ್ರೆಗಳ ಲಸಿಕಾ ದರಗಳಲ್ಲೂ ವ್ಯತ್ಯಾಸಗಳಿವೆ. ಜಿಲ್ಲೆಗೆ ಪೂರೈಕೆಯಾಗುತ್ತಿರುವ ಲಸಿಕೆಗಳ ಲೆಕ್ಕಾಚಾರವನ್ನು ಕೂಡ ಜಿಲ್ಲಾಡಳಿತ ಬಹಿರಂಗಪಡಿಸುತ್ತಿಲ್ಲ. ಕೆಲವು ಸರಕಾರಿ ಆಸ್ಪತ್ರೆಗಳ ಮುಂದೆ ಬೆಳಗ್ಗೆ 5 ಗಂಟೆಯಿಂದ ಹಿರಿಯ ನಾಗರಿಕರು ಸರದಿಯ ಸಾಲಲ್ಲಿ ನಿಂತರೂ ಲಸಿಕೆ ಸಿಗದೆ ಹಿಂತಿರುಗುತ್ತಿರುವುದು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಯುವಕರು ಲಸಿಕೆ ಹಾಕಿಸಿಕೊಳ್ಳುತ್ತಿರುವುದು ಆರ್ಥಿಕ ಸಂಕಷ್ಟದಲ್ಲಿರುವ ಜನರನ್ನು ಅಣಕಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರಕಾರಿ ಲಸಿಕೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆಯೆಂಬ ಆರೋಪವು ಗೊಂದಲಗಳಿಗೂ ಕಾರಣವಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತವು ಎಲ್ಲರಿಗೂ ಉಚಿತ ಲಸಿಕೆ ನೀಡಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.





