ಉಡುಪಿ: 35 ದಿನಗಳ ಬಳಿಕ ಜಿಲ್ಲೆಯಲ್ಲಿ ಕೊರೋನದಿಂದ ಶೂನ್ಯ ಸಾವು
580 ಮಂದಿಗೆ ಕೋವಿಡ್ ಪಾಸಿಟಿವ್; 923 ಮಂದಿ ಗುಣಮುಖ

ಉಡುಪಿ, ಜೂ.3: 35 ದಿನಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಯಾರೊಬ್ಬರೂ ಬಲಿಯಾಗಿಲ್ಲ. ಅಲ್ಲದೇ ದಿನದಲ್ಲಿ ಪಾಸಿಟಿವ್ ಬಂದವರ ಸಂಖ್ಯೆಯೂ 600ಕ್ಕಿಂತ ಕೆಳಗಿಳಿದಿದೆ. ಇಂದು ಒಟ್ಟು 580 ಮಂದಿ ಪಾಸಿಟಿವ್ ಬಂದಿದ್ದು, 923 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯೂ 4533ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಕಳೆದ ಎ.28ರಂದು ಜಿಲ್ಲೆಯಲ್ಲಿ ಕೊನೆಯ ಬಾರಿ ಕೊರೋನದಿಂದ ಯಾವುದೇ ಸಾವು ವರದಿಯಾಗಿರಲಿಲ್ಲ. ಆ ಬಳಿಕ ನಿರಂತರವಾಗಿ ಸಾವು ಸಂಭವಿಸಿದ್ದು, ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 148 ಮಂದಿ ಸಾವನ್ನಪ್ಪಿದ್ದರು. ಜಿಲ್ಲೆಯಲ್ಲಿ ಈಗ ಒಟ್ಟು ಸಾವಿನ ಸಂಖ್ಯೆ 338ಕ್ಕೇರಿದೆ.
ಜಿಲ್ಲೆಯಲ್ಲಿ ಬುಧವಾರ ಪಾಸಿಟಿವ್ ಬಂದ 580 ಮಂದಿಯಲ್ಲಿ 280 ಮಂದಿ ಪುರುಷರು ಹಾಗೂ 300 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 324, ಕುಂದಾಪುರ ತಾಲೂಕಿನ 129 ಹಾಗೂ ಕಾರ್ಕಳ ತಾಲೂಕಿನ 123 ಮಂದಿ ಇದ್ದು, ಉಳಿದ ನಾಲ್ವರು ಹೊರಜಿಲ್ಲೆಯವರು. ಇವರಲ್ಲಿ 14 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 566 ಮಂದಿ ಹೋಮ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.
ಬುಧವಾರ 923 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 55,807ಕ್ಕೇರಿದೆ. ನಿನ್ನೆ ಜಿಲ್ಲೆಯ 3161 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 60,678 ಆಗಿದೆ ಎಂದು ಡಾ. ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,02,064 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಇಂದು ಯಾರಲ್ಲೂ ಹೊಸದಾಗಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿಲ್ಲ. ಒಟ್ಟು 10 ಮಂದಿ ಈಗಲೂ ಸೋಂಕಿಗೆ ಚಿಕಿತ್ಸೆಯಲ್ಲಿದ್ದು, ಐವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
10,221 ಮಂದಿಗೆ ಲಸಿಕೆ
ಜಿಲ್ಲೆಯಲ್ಲಿ ಗುರುವಾರ ಒಟ್ಟು 10,221 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 6919 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 3302 ಮಂದಿ ಎರಡನೇ ಡೋಸ್ ಪಡೆದಿ ದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು 18ರಿಂದ 44 ವರ್ಷದೊಳಗಿನ 2404 ಮಂದಿ ಮೊದಲ ಡೋಸ್‌ನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 4486 ಮಂದಿ ಮೊದಲ ಡೋಸ್ ಹಾಗೂ 3279 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 19 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 33 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ ಎಂದವರು ನುಡಿದರು.
ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 2,58,351 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 84,485 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.







