ಚುನಾವಣೆಯಲ್ಲಿ ಎನ್ಡಿಎ ಪರ ಸ್ಪರ್ಧಿಸಲು ಸಿ.ಕೆ.ಜಾನುಗೆ 10 ಲಕ್ಷ ರೂ. ನೀಡಿರುವ ಆರೋಪ ನಿರಾಕರಿಸಿದ ಕೆ.ಸುರೇಂದ್ರನ್

photo: twitter.com/surendranbjp
ತಿರುವನಂತಪುರಂ, ಜೂ.3: ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಪರ ಸ್ಪರ್ಧೆಗೆ ಇಳಿಯುವಂತೆ ಜನಾಧಿಪತ್ಯ ರಾಷ್ಟೀಯ ಪಕ್ಷ(ಜೆಆರ್ಪಿ) ಅಧ್ಯಕ್ಷೆ ಸಿ.ಕೆ.ಜಾನುಗೆ 10 ಲಕ್ಷ ರೂ. ನೀಡಿರುವ ಆರೋಪವನ್ನು ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ನಿರಾಕರಿಸಿದ್ದಾರೆ. ವಯನಾಡ್ನ ಸುಲ್ತಾನ್ ಬತ್ತೇರಿ ಕ್ಷೇತ್ರದಿಂದ ಎನ್ಡಿಎ ಪರ ಜಾನು ಸ್ಪರ್ಧಿಸಿದರೆ 10 ಲಕ್ಷ ರೂ. ನೀಡುವುದಾಗಿ ಸುರೇಂದ್ರನ್ ಹಾಗೂ ಜೆಆರ್ಪಿ ಖಜಾಂಚಿ ಪ್ರಸೀಥಾ ನಡುವೆ ನಡೆದ ಸಂಭಾಷಣೆ ಎನ್ನಲಾದ ಆಡಿಯೊ ಕ್ಲಿಪ್ ಒಂದು ವೈರಲ್ ಆದ ಹಿನ್ನೆಲೆಯಲ್ಲಿ ಸುರೇಂದ್ರನ್ ಈ ಹೇಳಿಕೆ ನೀಡಿದ್ದಾರೆ. ಸುರೇಂದ್ರನ್ ಹಣ ನೀಡಿದ್ದಾರೆ ಎಂದು ಪ್ರಸೀಥಾ ಆರೋಪಿಸಿದ್ದರೆ, ಅದನ್ನು ನಿರಾಕರಿಸಿರುವ ಸುರೇಂದ್ರನ್, ಚುನಾವಣೆ ಬಳಿಕ ಪಕ್ಷದ ಹೆಸರು ಕೆಡಿಸಲು ಮಾಡುತ್ತಿರುವ ಪ್ರಯತ್ನಗಳ ಒಂದು ಭಾಗ ಇದಾಗಿದೆ ಎಂದಿದ್ದಾರೆ.
ಸಿಕೆ ಜಾನು ಸುಲ್ತಾನ್ ಬತ್ತೇರಿಯಿಂದ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಮತ್ತು ಆಕೆ ಹಣದ ಬೇಡಿಕೆ ಇಟ್ಟಿಲ್ಲ. ಪಕ್ಷದ ನಿಯಮದ ಪ್ರಕಾರ, ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು ಭರಿಸಲಾಗಿದೆ. ಬುಡಕಟ್ಟು ಸಮುದಾಯದ ನಾಯಕಿಯಾಗಿದ್ದಾರೆ ಎಂಬ ಕಾರಣದಿಂದ ಅವರ ವಿರುದ್ಧ ವಿವಾದ ಸೃಷ್ಟಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ನಾವು ಹಲವರೊಂದಿಗೆ ಮಾತನಾಡಿರುತ್ತೇವೆ. ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲು ಆಗದು. ಪ್ರಸೀಥಾರೊಂದಿಗೂ ಮಾತನಾಡಿದ್ದೇನೆ. ಆದರೆ ಹಣದ ಬಗ್ಗೆ ಮಾತಾಡಿದ್ದೇನೆ ಎನ್ನಲಾದ ಆಡಿಯೊ ಕ್ಲಿಪ್ ನಕಲಿ. ಸಿಪಿಐ(ಎಂ) ಹಾಗೂ ಒಂದು ವರ್ಗದ ಮಾಧ್ಯಮ ಬಿಜೆಪಿ ವಿರುದ್ಧ ಅಪಪ್ರಚಾರದಲ್ಲಿ ನಿರತವಾಗಿದೆ. ತ್ರಿಶ್ಯೂರ್ನ ಕಡಕರದಲ್ಲಿ ಜಫ್ತಿ ಮಾಡಲಾದ ಕಪ್ಪುಹಣಕ್ಕೂ ಬಿಜೆಪಿ ಮುಖಂಡರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಅನಗತ್ಯವಾಗಿ ಬಿಜೆಪಿ ಮುಖಂಡರನ್ನು ವಿಚಾರಣೆಗೆ ಕರೆಸಲಾಗುತ್ತಿದೆ ಎಂದು ಸುರೇಂದ್ರನ್ ಹೇಳಿದ್ದಾರೆ. ಚುನಾವಣೆಯ ಸಂದರ್ಭ ಕಡಕರದಲ್ಲಿ 3.5 ಕೋಟಿ ರೂ. ಕಪ್ಪುಹಣವನ್ನು ಪೊಲೀಸರು ಜಫ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಹಿರಿಯ ಮುಖಂಡರನ್ನು ವಿಚಾರಣೆ ನಡೆಸಲಾಗಿದೆ.







