ಕೇಂದ್ರದ ನೋಟಿಸ್ ಗೆ ಉತ್ತರಿಸಿದ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ

photo: Indian Express
ಹೊಸದಿಲ್ಲಿ: ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿರುವ ಶೋಕಾಸ್ ನೋಟಿಸ್ ಗೆ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಗುರುವಾರ ಉತ್ತರಿಸಿದ್ದಾರೆ.
ಪ್ರಧಾನಿ ಮೋದಿಯವರ ಸಭೆಯಿಂದ ನಾನು ದೂರವಿರಲಿಲ್ಲ ಹಾಗೂ ಮುಖ್ಯಮಂತ್ರಿ ಇರುವವರೆಗೂ ತಾನು ಅಲ್ಲಿದ್ದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿರ್ದೇಶನದಂತೆ, ಯಾಸ್ ಚಂಡಮಾರುತದಿಂದ ಹಾನಿಗೊಳಗಾದ ಪುರ್ಬಾ ಮೆದಿಡಿನಿಪುರ ಜಿಲ್ಲೆಯ ಜನಪ್ರಿಯ ಸಮುದ್ರ ರೆಸಾರ್ಟ್ ಪಟ್ಟಣವಾದ ದಿಘಾ ಪ್ರದೇಶದ ಪರಿಶೀಲನೆಗಾಗಿ ಸಭೆಯಿಂದ ಹೊರ ನಡೆದಿದ್ದೆ ಎಂದು ಆಲಾಪನ್ ಉತ್ತರಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಯಾಸ್ ಚಂಡಮಾರುತದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನಿರ್ಣಾಯಕ ಸಭೆಗೆ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಗೈರು ಹಾಜರಾಗಿರುವುದಕ್ಕೆ ಸಂಬಂಧಿಸಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಆಲಾಪನ್ ಬಂದೋಪಾಧ್ಯಾಯ ಅವರ ವಿರುದ್ಧ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.
ಮಮತಾ ಬ್ಯಾನರ್ಜಿ ಅವರೊಂದಿಗೆ ಪಿಎಂ ಮೋದಿಯವರ ಭೇಟಿಯ ವೇಳೆ ಹಾಜರಾಗದ ಆರೋಪದ ಮೇಲೆ, ಬಂದೋಪಾಧ್ಯಾಯರನ್ನು ಕೇಂದ್ರಕ್ಕೆ ವರ್ಗಾಯಿಸಲಾಯಿತು ಹಾಗೂ ತನ್ನ ಸೇವೆಯ ಕೊನೆಯ ದಿನದಂದು ದಿಲ್ಲಿಗೆ ವರದಿ ಮಾಡಲು ಹಾಗೂ ಅಲ್ಲಿ ಮೂರು ತಿಂಗಳ ವಿಸ್ತರಣೆಯನ್ನು ಪೂರೈಸಲು ಆದೇಶಿಸಲಾಗಿತ್ತು.
ಮಮತಾ ಬ್ಯಾನರ್ಜಿ ಅವರು ಬಂದೋಪಾಧ್ಯಾಯರನ್ನು ಬಿಡುಗಡೆ ಮಾಡಲು ನಿರಾಕರಿಸಿದರು ಹಾಗೂ ಬಂದೋಪಾಧ್ಯಾಯ ದಿಲ್ಲಿಗೆ ತೆರಳುವ ಬದಲು ನಿವೃತ್ತಿ ಹೊಂದಲು ನಿರ್ಧರಿಸಿದರು. ನಂತರ ಅವರನ್ನು ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿ ನೇಮಿಸಲಾಯಿತು.







