ಸಾರಿಗೆ ನಿಗಮಕ್ಕೆ ‘ಬಾಬಾಸಾಹೇಬ್ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣಕ್ಕೆ ಸುಮಲತಾ ಅಂಬರೀಶ್ ಮನವಿ

ಮಂಡ್ಯ, ಜೂ.3: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ಸುಗಳ ಸೇವೆಯ ಟ್ರೇಡ್ ಮಾರ್ಕ್ ಕೇರಳ ರಾಜ್ಯದ ಪಾಲಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಸಾರಿಗೆ ನಿಗಮಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೆನಪಿನಾರ್ಥ "ಬಾಬಾಸಾಹೇಬ್ ಸಾರಿಗೆ ಸಂಸ್ಥೆ" ಎಂದು ಮರುನಾಮಕರಣ ಮಾಡಲು ಸಂಸದೆ ಸುಮಲತಾ ಅಂಬರೀಶ್ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ ಸಾರಿಗೆಗೆ ಮುಂದೆ ಯಾವ ಹೆಸರಿಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಅಂಬೇಡ್ಕರ್ ಅವರ ನೆನಪಿನಾರ್ಥ ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ ಎಂದು ಹೆಸರಿಡಬೇಕೆಂದು ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.
''ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಸೇವೆಯ ಟ್ರೇಡ್ ಮಾರ್ಕ್ 27 ವರ್ಷಗಳ ಕಾನೂನು ಹೋರಾಟದ ನಂತರ ಕೇರಳ ರಾಜ್ಯದ ಪಾಲಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಸಾರಿಗೆ ನಿಗಮಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನೆನಪಿನಾರ್ಥ ‘ಬಾಬಾಸಾಹೇಬ್ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರಕಾರವನ್ನು ಈ ಮೂಲಕ ಕೋರುತ್ತೇನೆ'' ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೆಎಸ್‌ಆರ್‌ಟಿಸಿಗೆ ಹೆಸರು ಸೂಚಿಸಿದ ರಾಮಲಿಂಗಾರೆಡ್ಡಿ
ಕೆಎಸ್‌ಆರ್‌ಟಿಸಿ ಹೆಸರು ಸಂಬಂಧ ಕೇರಳ ರಾಜ್ಯ ಪರವಾಗಿ ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಮತ್ತೊಂದು ಹೆಸರು ಸೂಚಿಸಿದ್ದಾರೆ.
ಗುರುವಾರ ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅನ್ನು ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್‍ಪೋರ್ಟ್ ಕಂಪೆನಿ ಎಂದು ಮರು ನಾಮಕರಣ ಮಾಡುವಂತೆ ಸಲಹೆ ನೀಡಿದರು.
ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಕಾಲಾವಧಿಯಲ್ಲಿ ರಾಜ್ಯ ಸಾರಿಗೆ ಇಲಾಖೆ ಕೆಎಸ್ಸಾರ್ಟಿಸಿ ಎಂದು ಹೆಸರಿಡಲಾಗಿತ್ತು. ಆದರೆ, ಕೇರಳ ರಾಜ್ಯ ನಮ್ಮ ರಾಜ್ಯಕ್ಕಿಂತಲೂ ಮುಂಚೆ ಈ ಹೆಸರು ಇಟ್ಟಿದ್ದು, ಈ ಕಾರಣಕ್ಕೆ ಕೇರಳ ಪರವಾಗಿ ತೀರ್ಪು ನೀಡಲಾಗಿದೆ ಎಂದ ಅವರು, ಈ ವಿಚಾರವಾಗಿ ರಾಜ್ಯ ಸರಕಾರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದರು.
ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್‍ಪೋರ್ಟ್ ಕಂಪೆನಿ ಎಂದು ಮರು ನಾಮಕರಣ ಮಾಡಬಹುದು ಇದರಿಂದ ಯಾವುದೇ ಕಾನೂನು ಅಡಚಣೆ ಆಗುವುದಿಲ್ಲ. ಅಲ್ಲದೆ, ಕರ್ನಾಟಕ ಹಾಗೂ ಕೇರಳ ರಾಜ್ಯದ ಸಾರಿಗೆ ಇಲಾಖೆಗಳಿಗೆ ಕೆಎಸ್‌ಆರ್‌ಟಿಸಿ ಒಂದೇ ಹೆಸರು ಇರುವ ಹಿನ್ನೆಲೆ, 1994ರಲ್ಲಿ ಈ ವಿವಾದ ಸೃಷ್ಟಿಯಾಯಿತು ಎಂದು ಅವರು ವಿವರಿಸಿದರು.







