ಮೆಗಾಸಿಟಿ ಡೆವಲಪರ್ಸ್ ಹಗರಣ ಪ್ರಕರಣ: ಸಚಿವ ಯೋಗೇಶ್ವರ್ ವಿರುದ್ಧ ಸಿಐಡಿಗೆ ದೂರು

ಬೆಂಗಳೂರು, ಜೂ.3: ಮೆಗಾಸಿಟಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಅಪರಾಧ ವಿಭಾಗಕ್ಕೆ(ಸಿಐಡಿ) ಮೆಗಾಸಿಟಿ ಸೈಟ್ ಮೆಂಬರ್ಸ್ ವೆಲ್‍ಫೇರ್ ಅಸೋಸಿಯೇಷನ್ ದೂರು ಸಲ್ಲಿಸಿದೆ.
ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವಂತೆ ದೂರಿನಲ್ಲಿ ಉಲ್ಲೇಖಿಸಿದ್ದು, ಉನ್ನತ ಮಟ್ಟದ ತನಿಖೆ ನಡೆಸುವಂತೆ ಅಸೋಸಿಯೇಷನಿನ ರವೀಂದ್ರ ಬೆಲೆಯೂರು ಒತ್ತಾಯ ಮಾಡಿದ್ದಾರೆ.
9,000 ಜನರಿಂದ 70 ಕೋಟಿ ಸಂಗ್ರಹಿಸಿ ವಂಚನೆ ಮಾಡಲಾಗಿದೆ. ಅಲ್ಲದೆ, 25 ವರ್ಷಗಳಾದರೂ ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ದೊರಕಿಲ್ಲ. ಕೇಂದ್ರ ಸರಕಾರದ ಗಂಭೀರ ವಂಚನೆ ಪ್ರಕರಣಗಳ ತನಿಖಾ ಕಚೇರಿ (ಎಸ್‍ಎಫ್‍ಐಒ) ಮತ್ತು ರಾಜ್ಯದ ಸಿಐಡಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆದರೂ, ಗ್ರಾಹಕರಿಗೆ ನ್ಯಾಯ ಲಭಿಸಿಲ್ಲ ಎಂದು ಮೇ31 ರಂದು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ಗ್ರಾಹಕರ ವೇದಿಕೆಗಳ ಆದೇಶದಂತೆ 69 ಮಂದಿಗೆ ಪಾವತಿಸಬೇಕಿದ್ದ 4.86 ಕೋಟಿಯನ್ನು 2006ರಿಂದಲೂ ನೀಡಿಲ್ಲ. ಹೂಡಿಕೆದಾರರ ಹಿತಾಸಕ್ತಿ ರಕ್ಷಣಾ ಕಾಯ್ದೆಯ ಅಡಿಯಲ್ಲೂ ಕ್ರಮ ಜರುಗಿಸಿಲ್ಲ. ಕಂಪೆನಿಯ ಸಂಸ್ಥಾಪಕ ಸಚಿವ ಯೋಗೇಶ್ವರ್ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರವೀಂದ್ರ ಬೆಲೆಯೂರು ಆರೋಪ ಮಾಡಿದ್ದಾರೆ.





