ಪ್ರಧಾನಿ ಮೋದಿಗೆ ಕರೆ ಮಾಡಿ ಭಾರತಕ್ಕೆ ಲಸಿಕೆ ಸರಬರಾಜಿನ ಭರವಸೆ ನೀಡಿದ ಕಮಲಾ ಹ್ಯಾರಿಸ್

ಹೊಸದಿಲ್ಲಿ: ಜಾಗತಿಕ ಕೋವಿಡ್ ಲಸಿಕೆ ಹಂಚಿಕೆ ಯೋಜನೆ ಭಾಗವಾಗಿ ಮೊದಲ 25 ಮಿಲಿಯನ್ ಡೋಸ್‌ಗಳನ್ನು ಪೂರೈಸುವ ಯೋಜನೆಯಡಿ ಅಮೆರಿಕದಿಂದ ಕೋವಿಡ್ ಲಸಿಕೆಗಳನ್ನು ಸ್ವೀಕರಿಸುವ ಬೆರಳೆಣಿಕೆಯ ದೇಶಗಳಲ್ಲಿ ಭಾರತವೂ ಸೇರಲಿದೆ ಎಂದು ಉಪಾಧ್ಯಕ್ಷೆ ಕಮಲಾ ಡಿ. ಹ್ಯಾರಿಸ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಡಿರುವ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.
"ಆಡಳಿತದ ಪ್ರಯತ್ನಗಳು ವಿಶಾಲ ಜಾಗತಿಕ ವ್ಯಾಪ್ತಿಯನ್ನು ಸಾಧಿಸುವುದು, ಉಲ್ಬಣಗಳು ಹಾಗೂ ಇತರ ತುರ್ತು ಸಂದರ್ಭಗಳು ಹಾಗೂ ಸಾರ್ವಜನಿಕ ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವುದು ಮತ್ತು ಲಸಿಕೆಗಳನ್ನು ಕೋರಿದ ದೇಶಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಲಾಗುವುದು ಎಂದು ಉಪಾಧ್ಯಕ್ಷರು ಪುನರುಚ್ಚರಿಸಿದ್ದಾರೆ" ಎಂದು ಅಮೆರಿಕದ ಸರಕಾರ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಜಾಗತಿಕ ಲಸಿಕೆ ಹಂಚಿಕೆಗಾಗಿ ಅಮೆರಿಕದ ಕಾರ್ಯತಂತ್ರದ ಭಾಗವಾಗಿ ಕಮಲಾ ಹ್ಯಾರಿಸ್ ಅವರ ಭಾರತಕ್ಕೆ ಲಸಿಕೆ ಸರಬರಾಜಿನ ಭರವಸೆಯನ್ನು ನಾನು ಬಹಳವಾಗಿ ಪ್ರಶಂಸಿಸುತ್ತೇನೆ. ಅಮೆರಿಕ ಸರಕಾರ ಹಾಗೂ ಪ್ರವಾಸಿ ಭಾರತೀಯರ ಎಲ್ಲ ಬೆಂಬಲ ಹಾಗೂ ಒಗ್ಗಟ್ಟಿಗೆ ನಾನು ಅವರಿಗೆ ಧನ್ಯವಾದ ಅರ್ಪಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದರು.