ತರೀಕರೆ: ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಗಳು ಬಂದ್
ಕಪ್ಪು ಪಟ್ಟಿ ಧರಿಸಿ ಸರಕಾರಿ ವೈದ್ಯರ ಪ್ರತಿಭಟನೆ

ಚಿಕ್ಕಮಗಳೂರು, ಜೂ.3: ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಐಎಂಎ ಸಂಘಟನೆಯ ಸದಸ್ಯರು ಗುರುವಾರ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಮೇ 31ರಂದು ಪಟ್ಟಣದ ಖಾಸಗಿ ಆಸ್ಪತ್ರೆಯಾಗಿರುವ ಬಸವೇಶ್ವರ ಮಕ್ಕಳ ಆಸ್ಪತ್ರೆಯ ವೈದ್ಯ ಡಾ.ದೀಪಕ್ ಮೇಲೆ ಪ್ರತಿಕಾರ ತೀರಿಸಿಕೊಳ್ಳುವ ಉದ್ದೇಶದಿಂದ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ಡಾ.ದೀಪಕ್ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಕೂಡಲೇ ಅವರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಘಟನೆಯನ್ನು ಐಎಂಎ ಖಂಡಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವುದರೊಂದಿಗೆ ವೈದ್ಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿ ಗುರುವಾರ ತರೀಕರೆ ತಾಲೂಕಿನ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಆಸ್ಪತ್ರೆ, ಕ್ಲಿನಿಕ್‍ಗಳನ್ನು ಬಂದ್ ಮಾಡಿದ್ದರು.
ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆಗೆ ಸರಕಾರಿ ಆಸ್ಪತ್ರೆಯ ವೈದ್ಯರೂ ಬೆಂಬಲ ವ್ಯಕ್ತಪಡಿಸಿ ಗುರುವಾರ ಕೈಗಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಘಟನೆಯನ್ನು ಖಂಡಿಸಿದ್ದು, ಕೊರೋನ ಸಂದರ್ಭದಲ್ಲಿ ಹಗಲಿರುಳು ಮನೆ, ಕುಟುಂಬದವರನ್ನು ಬಿಟ್ಟು ಪ್ರಾಣವನ್ನೂ ಲೆಕ್ಕಿಸದೇ ಸಾರ್ವಜನಿಕರ ಸೇವೆ ಮಾಡುತ್ತಿರುವ ವೈದ್ಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.
ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಗುರುವಾರ ತರೀಕೆರೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಿಗದೆ ಪರದಾಡಿದರು. ಬಹುತೇಕ ಸಾರ್ವಜನಿಕರು ಸರಕಾರಿ ಆಸ್ಪತ್ರೆಗಳತ್ತ ಮುಖಮಾಡಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಗುರುವಾರ ಜನರ ಸಂಖ್ಯೆ ಹೆಚ್ಚು ಕಂಡುಬಂತು. ಸರಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಪ್ರತಿಭಟನೆ ಅಂಗವಾಗಿ ಐಎಂಎ ಸದಸ್ಯ ವೈದ್ಯರು ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದು, ಜೂ.6ರವರೆಗೆ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡುವುದಾಗಿ ಮನವಿ ಮಾಡಿದ್ದರು. ಆದರೆ ತರೀಕೆರೆ ತಹಶೀಲ್ದಾರ್, ಐಎಂಎ ಸಂಘದ ಪದಾಧಿಕಾರಿಗಳ ಮನವೊಲಿಸಿದ್ದರಿಂದ ವೈದ್ಯರು ಪ್ರತಿಭಟನೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿದ್ದಾರೆಂದು ತಿಳಿದು ಬಂದಿದೆ.
ಐಸಿಯುನಲ್ಲಿ ಡಾ.ದೀಪಕ್: ಇನ್ನು ಮೇ 31ರಂದು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಮಕ್ಕಳ ತಜ್ಞ ಡಾ.ದೀಪಕ್ ಅವರ ತಲೆಗೆ ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆದಿರುವುದರಿಂದ ಅವರನ್ನು ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಡಾ.ದೀಪಕ್ ಅವರ ತಲೆಯ ಮೆದುಳಿನ ಭಾಗಕ್ಕೂ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯ ವೈದ್ಯರು ಡಾ.ದೀಪಕ್ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು, ಸದ್ಯ ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಾ.ದೀಪಕ್ ಸಹೋದರ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಪ್ರತಿಕಾರಕ್ಕಾಗಿ ಹಲ್ಲೆ
ಡಾ.ದೀಪಕ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಘಟನೆ ಸಂಬಂಧ ತರೀಕೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಗಳು ತರೀಕೆರೆ ತಾಲೂಕಿನ ತಗಡ ಗ್ರಾಮದವರಾಗಿದ್ದಾರೆ. ಆರೋಪಿಗಳಾದ ವೇಣು, ನಿತಿನ್, ವೆಂಕಟೇಶ್, ಚಂದ್ರಶೇಖರ್ ವೈದ್ಯರ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಹಲ್ಲೆ ಮಾಡಿದ್ದಾರೆಂದು ತರೀಕೆರೆ ಪೊಲೀಸರು ತಿಳಿಸಿದ್ದಾರೆ.
ತಗಡ ಗ್ರಾಮದ ಭುವನ್ ಎಂಬ ಬಾಲಕನಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಪೋಷಕರು ಇತ್ತೀಚೆಗೆ ಭುವನ್‍ನನ್ನು ಡಾ.ದೀಪಕ್ ಅವರ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬಾಲಕನಿಗೆ ಡಾ.ದೀಪಕ್ ಚಿಕಿತ್ಸೆ ನೀಡಿದ್ದರೂ ಜ್ವರ ಕಡಿಮೆಯಾಗದ ಪರಿಣಾಮ ಬಾಲಕನನ್ನು ಶಿವಮೊಗ್ಗ ನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದ. ಈ ಘಟನೆಯಿಂದ ಕೆರಳಿದ್ದ ಬಾಲಕನ ಕುಟುಂಬಸ್ಥರು, ಡಾ.ದೀಪಕ್ ಬಾಲಕನಿಗೆ ಓವರ್ಡೋಸ್ ಇಂಜೆಕ್ಷನ್ ನೀಡಿದ್ದರಿಂದ ಸಾವನ್ನಪ್ಪಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಮಧ್ಯೆ ಬಾಲಕನ ಮಾವನೊಬ್ಬ ವೈದ್ಯನಿಗೆ ಕರೆ ಮಾಡಿ ಜೀವಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಮೇ 31ರಂದು ರವಿವಾರ ಡಾ.ದೀಪಕ್ ತಮ್ಮ ಆಸ್ಪತ್ರೆಯಿಂದ ಮನೆಗೆ ಸೈಕಲ್‍ನಲ್ಲಿ ಹೋಗುತ್ತಿದ್ದ ವೇಳೆ ನಿರ್ಜನ ಪ್ರದೇಶದಲ್ಲಿ ಬಾಲಕನ ಮಾವ ತನ್ನ ಮೂವರು ಸ್ವೇಹಿತರೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹಲ್ಲೆ ವೇಳೆ ಡಾ.ದೀಪಕ್ ಹೆಲ್ಮೆಟ್ ಧರಿಸಿದ್ದರಿಂದ ದುಷ್ಕರ್ಮಿಗಳ ಪೆಟ್ಟು ತಲೆಗೆ ಬಿದ್ದಿಲ್ಲ ಎನ್ನಲಾಗಿದೆ.







