ಕೋವಿಡ್ ಸೋಂಕಿತ ಇಬ್ಬರು ಹಿರಿಯ ನಾಗರಿಕರಿಗೆ ಮೊನೊಕ್ಲೊನಲ್ ಪ್ರತಿಕಾಯ ಚಿಕಿತ್ಸೆ ಯಶಸ್ವಿ
ಹೊಸದಿಲ್ಲಿ, ಜೂ.3: ಕೋವಿಡ್ ಸೋಂಕಿತ ಹಾಗೂ ಹೃದಯ ಸಂಬಂಧಿ ಸಮಸ್ಯೆಯಿರುವ ಇಬ್ಬರು ಹಿರಿಯ ನಾಗರಿಕರಿಗೆ ಹೊಸದಿಲ್ಲಿಯ ಖಾಸಗಿ ಆಸ್ಪತೆಯಲ್ಲಿ ಮೊನೊಕ್ಲೊನಲ್ ಪ್ರತಿಕಾಯ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಗುರುವಾರ ಹೇಳಿದ್ದಾರೆ.
ಮೊನೊಕ್ಲೊನಲ್ ಪ್ರತಿಕಾಯ ಚಿಕಿತ್ಸೆಯು ಸೋಂಕಿನ ಸೌಮ್ಯ ಲಕ್ಷಣವುಳ್ಳ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು 70%ದಷ್ಟು ಕಡಿಮೆಗೊಳಿಸುತ್ತದೆ. ಸುನಿರ್ಮಲ್ ಘಾಟಕ್(70 ವರ್ಷ) ಹಾಗೂ ಸುರೇಶ್ ಕುಮಾರ್ ಟೆಹ್ರಾನ್ (65 ವರ್ಷ)ಗೆ ಮಂಗಳವಾರ ಹೊಸದಿಲ್ಲಿಯ ಬಿಎಲ್‌ಕೆ-ಮ್ಯಾಕ್ಸ್ ಸುಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊನೊಕ್ಲೊನಲ್ ಪ್ರತಿಕಾಯ ಚಿಕಿತ್ಸೆಯ ಭಾಗವಾಗಿ ಕ್ಯಾಸಿರಿವಿಮ್ಯಾಬ್ ಮತ್ತು ಇಮ್ಡೆವಿಮ್ಯಾಬ್ ಲಸಿಕೆಯ ಸಮ್ಮಿಶ್ರ ಚಿಕಿತ್ಸೆ(ಕಾಕ್‌ಟೈಲ್ ಥೆರಪಿ) ನೀಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಅಮೆರಿಕದ ಸಂಸ್ಥೆ ಅಭಿವೃದ್ಧಿಗೊಳಿಸಿರುವ ಈ ಸಮ್ಮಿಶ್ರ ಚಿಕಿತ್ಸೆಯು ರೋಗಿಗಳಲ್ಲಿ ಸಾರ್ಸ್-2 ಮತ್ತು ಕೋವಿಡ್-19 ವೈರಸ್ ವಿರುದ್ಧದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಘಾಟಕ್ ಈ ಹಿಂದೆ ಹೃದಯದ ಸಮಸ್ಯೆಯಿಂದ ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು. ಟೆಹ್ರಾನ್ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇಬ್ಬರಲ್ಲೂ ಆಮ್ಲಜನಕ ಆರ್ದ್ರೀಕರಣ ಮಟ್ಟ 95%ವಿತ್ತು ಮತ್ತು ಕೊರೋನ ಸೋಂಕಿನ ಮೃದು ಲಕ್ಷಣ ಕಂಡುಬಂದ 3 ದಿನದೊಳಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಇಬ್ಬರಿಗೂ
ಮೊನೊಕ್ಲೊನಲ್ ಪ್ರತಿಕಾಯ ಸಮ್ಮಿಶ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಕೊರೋನ ಸೋಂಕು ಗಂಭೀರ ಮಟ್ಟಕ್ಕೆ ತಿರುಗುವ ಅಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಮೊನೊಕ್ಲೋನಲ್ ಪ್ರತಿಕಾಯ ಸಮ್ಮಿಶ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಎಬೋಲಾ, ಎಚ್‌ಐವಿ ಮುಂತಾದ ಸೋಂಕಿಗೆ ಈ ಚಿಕಿತ್ಸೆ ಬಳಸಲಾಗುತ್ತಿತ್ತು. 65 ವರ್ಷ ಮೀರಿದ, ಕೊರೋನ ಸೋಂಕಿನ ಲಕ್ಷಣ ಕಂಡು ಬಂದ 10 ದಿನದೊಳಗೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಈ ಚಿಕಿತ್ಸಾ ವಿಧಾನ ಅತ್ಯಂತ ಸೂಕ್ತವಾಗಿದೆ ಎಂದು ಬಿಎಲ್‌ಕೆ-ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ನಿರ್ದೇಶಕ ಡಾ. ಸಂದೀಪ್ ನಾಯರ್ ಹೇಳಿದ್ದಾರೆ.