ವಿಶೇಷ ಆರ್ಥಿಕ ಪ್ಯಾಕೇಜ್‍ಗೆ ಒತ್ತಾಯಿಸಿ ಶಿಕ್ಷಕರ ಆನ್‍ಲೈನ್ ಪ್ರತಿಭಟನೆ
ಬೆಂಗಳೂರು, ಜೂ. 3: ಕೋವಿಡ್ ಸಂಕಷ್ಟದಿಂದಾಗಿ ಅಗತ್ಯ ಮೂಲಭೂತ ಸೌಕರ್ಯಗಳಿಗೂ ಪರದಾಡುತ್ತಿರುವ ಖಾಸಗಿ ಶಾಲಾ-ಕಾಲೇಜು ಶಿಕ್ಷಕರಿಗೆ ರಾಜ್ಯ ಸರಕಾರ ಕೂಡಲೇ ವಿಶೇಷ ಆರ್ಥಿಕ ಪ್ಯಾಕೇಜ್‍ನ್ನು ಘೋಷಿಸಬೇಕೆಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಒತ್ತಾಯಿಸಿದ್ದಾರೆ.
ಗುರುವಾರ ಖಾಸಗಿ ಶಾಲಾ-ಕಾಲೇಜು ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ರಾಜ್ಯಾದ್ಯಂತ ಶಿಕ್ಷಕರು ನಡೆಸಿದ ಆನ್‍ಲೈನ್ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಲಾಕ್‍ಡೌನ್‍ನಿಂದಾಗಿ ಶಾಲಾ ಕಾಲೇಜುಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಸಮಾಜವನ್ನು ಶಿಕ್ಷಕ ಸಮುದಾಯವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರೂ ತಮ್ಮ ಬದುಕನ್ನು ಅಲ್ಪಸ್ವಲ್ಪ ಗೌರವದಿಂದ ಸಾಗಿಸುತ್ತಿದ್ದ ಶಿಕ್ಷಕರು, ಉಪನ್ಯಾಸಕರಿಗೆ ಈಗ ಸಂಪೂರ್ಣವಾಗಿ ಅನಿಶ್ಚಿತತೆ ಆವರಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ,
ಕೆಲ ಶಿಕ್ಷಕರು ಶಿಕ್ಷಣೇತರ ಕ್ಷೇತ್ರಗಳಲ್ಲಿ ಸ್ವಉದ್ಯೋಗಿಯಾಗಿ ತರಕಾರಿ, ಹಣ್ಣು ಮಾರುವ ಮತ್ತು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವಂಥ ದಯನೀಯ ಪರಿಸ್ಥಿತಿ ಬಂದೊದಗಿದೆ. ಇಷ್ಟಾಗಿಯೂ ಕೆಲವರಿಗೆ ಜೀವನ ಸಾಗಿಸುವುದೇ ಭಾರವಾಗುತ್ತಿದೆ. ಇನ್ನು ಕೆಲವರಂತೂ ಆರ್ಥಿಕ ಹೊರೆಯನ್ನು ತಾಳಲಾಗದೆ, ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಗಳು ನಡೆಯುತ್ತಿವೆ. ಇವು ಶಿಕ್ಷಕ ಸಮುದಾಯವು ಎಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದಕ್ಕೆ ಕೆಲ ನಿದರ್ಶನಗಳಷ್ಟೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ- ಕಾಲೇಜುಗಳು ನಡೆಯುತ್ತಿಲ್ಲವೆಂಬ ನೆಪವೊಡ್ಡಿ ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಹಾಗೂ ಈ ಬಾರಿ ಡೊನೇಷನ್ ಬಂದಿಲ್ಲವೆಂದು ಫೆಬ್ರವರಿ ತಿಂಗಳಿನಿಂದ ನ್ಯಾಯಯುತವಾಗಿ ನೀಡಬೇಕಾದ ಸಂಬಳವನ್ನು ನೀಡಿಲ್ಲ. ಯಾರನ್ನೂ ಕೆಲಸದಿಂದ ತೆಗೆದುಹಾಕಬಾರದೆಂದು ಸರಕಾರ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದರು ಅದಕ್ಕೆ ಸಂಸ್ಥೆಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಆದ್ದರಿಂದ ಈ ಕೂಡಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕದಂತೆ ಸ್ಪಷ್ಟ ಆದೇಶ ಹೊರಡಿಸಬೇಕು. ಈ ಆದೇಶವನ್ನು ಉಲ್ಲಂಘಿಸದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.







