ದೇಶದಲ್ಲಿ ಕೋವಿಡ್ ಎರಡನೆ ಅಲೆಗೆ 624 ವೈದ್ಯರು ಬಲಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜೂ.3: ಕೋವಿಡ್-19 ಎರಡನೆ ಅಲೆಯಲ್ಲಿ ಸುಮಾರು 624 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆಂದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗುರುವಾರ ತಿಳಿಸಿದೆ.
ದಿಲ್ಲಿಯಲ್ಲಿ 109 ಮಂದಿ ವೈದ್ಯರು ಸಾವನ್ನಪ್ಪಿದ್ದು, ಇದು ದೇಶದಲ್ಲೇ ಅತ್ಯಂತ ಗರಿಷ್ಠವಾಗಿದೆ. ಬಿಹಾರದಲ್ಲಿ 96 ಮಂದಿ, ಉತ್ತರಪ್ರದೇಶದಲ್ಲಿ 79 ಮಂದಿ ಹಾಗೂ ರಾಜಸ್ಥಾನದಲ್ಲಿ 43 ಮಂದಿ ವೈದ್ಯರು ಸಾವನ್ನಪ್ಪಿದ್ದು,ದಿಲ್ಲಿ ಬಳಿಕ ಗರಿಷ್ಠ ಸಂಖ್ಯೆಯ ವೈದ್ಯರು ಸಾವನ್ನಪ್ಪಿರುವ ಇತರ ಮೂರು ರಾಜ್ಯಗಳಾಗಿವೆ.
ಜಾರ್ಖಂಡ್ನಲ್ಲಿ 39 ಮಂದಿ ವೈದ್ಯರು, ಆಂಧ್ರಪ್ರದೇಶದಲ್ಲಿ 34, ತೆಲಂಗಾಣದಲ್ಲಿ 32 ಹಾಗೂ ಗುಜರಾತ್ನಲ್ಲಿ 31 ಮಂದಿ ವೈದ್ಯರು ಕೋವಿಡ್19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. 23 ಮಂದಿ ವೈದ್ಯರು ಮಹಾರಾಷ್ಟ್ರದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.
ಗುರುವಾರ ಭಾರತದಲ್ಲಿ 1,24,154 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 2887 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ 2020ರ ಜನವರಿಯಿಂದೀಚೆಗೆ ವರದಿಯಾದ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 2,84,41,986ಕ್ಕೇರಿದೆ ಹಾಗೂ ಮೃತರ ಸಂಖ್ಯೆ 3,37,989ಕ್ಕೆ ತಲುಪಿದೆ.





