ಭಾರತದ ನಿಲುವು ಹೊಸದೇನಲ್ಲ : ಗಾಝಾ ಹಿಂಸಾಚಾರ ನಿರ್ಣಯ ಮತದಾನದ ಕುರಿತ ಫೆಲೆಸ್ತೀನ್ ಟೀಕೆಗೆ ಕೇಂದ್ರ ಉತ್ತರ

ಹೊಸದಿಲ್ಲಿ,ಜೂ.3: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಗಾಝಾ ಹಿಂಸಾಚಾರದ ಕುರಿತು ತನಿಖೆಗೆ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿದಿದ್ದಕ್ಕಾಗಿ ಫೆಲೆಸ್ತೀನ್ ಟೀಕಿಸಿರುವ ಹಿನ್ನೆಲೆಯಲ್ಲಿ ತನ್ನ ನಿಲುವು ಹೊಸದೇನಲ್ಲ ಎಂದು ಭಾರತವು ಗುರುವಾರ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅವರು,ಮತದಾನದಿಂದ ದೂರವುಳಿದಿದ್ದ ಇತರ ದೇಶಗಳಿಗೂ ಫೆಲೆಸ್ತೀನ್ ಇಂತಹುದೇ ಪತ್ರಗಳನ್ನು ಬರೆದಿದೆ ಎಂದು ತಿಳಿಸಿದರು.
‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ನಾವು ಹೊಸ ನಿಲುವೇನನ್ನೂ ತಳೆದಿರಲಿಲ್ಲ
. ಹಿಂದಿನ ಸಂದರ್ಭಗಳಲ್ಲಿಯೂ ನಾವು ಮತದಾನದಿಂದ ದೂರವುಳಿದಿದ್ದೆವು. ಇದು ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತದೆ ಮತ್ತು ಈ ಪ್ರಶ್ನೆಗಳಿಗೆ ಉತ್ತರಿಸಿದೆ ಎಂದು ನಾನು ಭಾವಿಸಿದ್ದೇನೆ ’ ಎಂದರು.
ಮೇ 27ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಗಾಝಾದಲ್ಲಿ ಇತ್ತೀಚಿಗೆ ನಡೆದಿದ್ದ ಹಿಂಸಾಚಾರ,ಫೆಲೆಸ್ತೀನ್ನಲ್ಲಿಯ ಮತ್ತು ಇಸ್ರೇಲ್ನಲ್ಲಿಯ ಪ್ರದೇಶಗಳ ವ್ಯವಸ್ಥಿತ ದುರುಪಯೋಗದ ಕುರಿತು ವಿಚಾರಣಾ ಆಯೋಗದ ಸ್ಥಾಪನೆಯನ್ನು ಪ್ರಸ್ತಾವಿಸಿದ್ದ ನಿರ್ಣಯದ ಮೇಲೆ ಭಾರತ ಸೇರಿದಂತೆ 14 ದೇಶಗಳು ಮತ ಚಲಾಯಿಸಿರಲಿಲ್ಲ. ಇಸ್ರೇಲ್ ಮತ್ತು ಹಮಸ್ ನಡುವೆ ಮೇ 21ರಂದು ಕದನ ವಿರಾಮ ಘೋಷಣೆಯಾಗುವವರೆಗಿನ 11 ದಿನಗಳ ಹಿಂಸಾಚಾರದಲ್ಲಿ ಗಾಝಾದಲ್ಲಿ 67 ಮಕ್ಕಳು ಸೇರಿದಂತೆ ಕನಿಷ್ಠ 232 ಜನರು ಕೊಲ್ಲಲ್ಪಟ್ಟಿದ್ದರು.
ಫ್ರಾನ್ಸ್,ಜಪಾನ್,ನೆದರ್ಲ್ಯಾಂಡ್ಸ್,ಇಟಲಿ,ನೇಪಾಳ,ಪೋಲಂಡ್ ಮತ್ತು ದ.ಕೊರಿಯಾ ಮತದಾನದಿಂದ ದೂರವುಳಿದಿದ್ದ ದೇಶಗಳಲ್ಲಿ ಸೇರಿವೆ. 47 ಸದಸ್ಯರ ಮಂಡಳಿಯಲ್ಲಿ 24 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸುವುದರೊಂದಿಗೆ ಅದು ಅಂಗೀಕಾರ ಗೊಂಡಿತ್ತು.
ಮೇ 30ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರಿಗೆ ಪತ್ರವನ್ನು ಬರೆದಿದ್ದ ಫೆಲೆಸ್ತೀನಿ ವಿದೇಶಾಂಗ ಸಚಿವ ರಿಯಾದ್ ಅಲ್-ಮಲಿಕಿ ಅವರು, ಭಾರತದ ನಿರ್ಧಾರಗಳು ಫೆಲೆಸ್ತೀನಿ ಜನರು ಸೇರಿದಂತೆ ಎಲ್ಲ ಜನರ ಮಾನವಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ಮಾನವಹಕ್ಕುಗಳ ಮಂಡಳಿಯ ಮಹತ್ವದ ಪ್ರಯತ್ನವನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿದ್ದರು.







