ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: 100ಕ್ಕೂ ಹೆಚ್ಚು ಬುದ್ಧಿಜೀವಿಗಳಿಂದ ರಾಷ್ಟ್ರಪತಿಗೆ ಪತ್ರ

ರಾಷ್ಟ್ರಪತಿ ರಾಮನಾಥ್ ಕೋವಿಂದ್
ಹೊಸದಿಲ್ಲಿ, ಜೂ.4: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಹಿನ್ನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆಗೆ ಸೂಕ್ತ ಭದ್ರತೆ ಒದಗಿಸಲು ಹಸ್ತಕ್ಷೇಪ ಮಾಡುವಂತೆ ಆಗ್ರಹಿಸಿ ಸಾಮಾಜಿಕ ಅಭಿವೃದ್ಧಿ ಕೇಂದ್ರ ಮತ್ತು 100ಕ್ಕೂ ಹೆಚ್ಚು ಬುದ್ಧಿಜೀವಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ, ಸರ್ಕಾರಿ ಪ್ರಾಯೋಜಿತ ಟಿಎಂಸಿ ಕಾರ್ಯಕರ್ತರು ರಾಜ್ಯ ಪೊಲೀಸರ ನೆರವಿನೊಂದಿಗೆ ಪರಿಶಿಷ್ಟ ಜಾತಿ/ ಸಮುದಾಯವನ್ನು ಗುರಿ ಮಾಡಿ ಕೊಲೆ, ಲೂಟಿ, ಅತ್ಯಾಚಾರ ಮತ್ತು ಅವರ ಭೂಮಿ ವಶಪಡಿಸಿಕೊಳ್ಳುವಂಥ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಆಪಾದಿಸಲಾಗಿದೆ.
ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ 11 ಸಾವಿರಕ್ಕೂ ಹೆಚ್ಚು ಮಂದಿ ಮನೆ ಕಳೆದುಕೊಂಡಿದ್ದು, 40 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 1,627 ದಾಳಿಗಳು ನಡೆದಿವೆ. 5 ಸಾವಿರಕ್ಕೂ ಹೆಚ್ಚು ಮನೆಗಳನ್ನು ಧ್ವಂಸ ಮಾಡಲಾಗಿದ್ದು, 142 ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. 26 ಮಂದಿ ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ.
ಹಿಂಸಾಚಾರ ಸಂತ್ರಸ್ತರಾದ 2,000ಕ್ಕೂ ಹೆಚ್ಚು ಮಂದಿ ಅಸ್ಸಾಂ, ಒಡಿಶಾ ಮತ್ತು ಜಾರ್ಖಂಡ್ಗೆ ವಲಸೆ ಹೋಗಿದ್ದಾರೆ ಎಂದೂ ವಿವರಿಸಲಾಗಿದೆ.







