ನಿವೃತ್ತ ಅಧಿಕಾರಿಗಳ ಸೇವೆ ಬಳಸಿಕೊಳ್ಳುವ ಮುನ್ನ ಕೇಂದ್ರ ವಿಜಿಲೆನ್ಸ್ ಆಯೋಗದ ಅನುಮತಿ ಈಗ ಕಡ್ಡಾಯ
ಆಲಾಪನ್ ಬಂದೋಪಾಧ್ಯಾಯ ಪ್ರಕರಣದ ಬೆನ್ನಲ್ಲೆ ನಡೆದ ಬೆಳವಣಿಗೆ

ಆಲಾಪನ್ ಬಂದೋಪಾಧ್ಯಾಯ
ಹೊಸದಿಲ್ಲಿ: ನಿವೃತ್ತ ಸರಕಾರಿ ಅಧಿಕಾರಿಗಳನ್ನು ಯಾವುದೇ ಹುದ್ದೆಗೆ ನೇಮಕಾತಿ ಮಾಡುವ ಮೊದಲು ವಿಜಿಲೆನ್ಸ್ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಜೂನ್ 3, ಗುರುವಾರ ಹೊರಡಿಸಿದ ಆದೇಶದಲ್ಲಿ ಕೇಂದ್ರ ವಿಜಿಲೆನ್ಸ್ ಆಯೋಗ ತಿಳಿಸಿದೆ. ಎಲ್ಲಾ ಕೇಂದ್ರ ಸರಕಾರಿ ಇಲಾಖೆಗಳ ಕಾರ್ಯದರ್ಶಿಗಳು, ಸಾರ್ವಜನಿಕ ರಂಗದ ಬ್ಯಾಂಕುಗಳ ಮುಖ್ಯಸ್ಥರಿಗೂ ಈ ಆದೇಶ ಕಳುಹಿಸಲಾಗಿದೆ. ಯಾವುದೇ ಸಂಸ್ಥೆಯಿಂದ ನಿವೃತ್ತ ಅಧಿಕಾರಿಯೊಬ್ಬರು ತಮ್ಮ ಕಡ್ಡಾಯ 'ಕೂಲಿಂಗ್-ಆಫ್' ಅವಧಿ ಮುಕ್ತಾಯಗೊಳ್ಳುವ ಮುನ್ನವೇ ಉದ್ಯೋಗ ಆಫರ್ ಒಪ್ಪಿದಲ್ಲಿ ಅದನ್ನು ಗಂಭೀರ ತಪ್ಪು ಎಂದು ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
"ಕೆಲವೊಮ್ಮೆ ಸರಕಾರಿ ಸಂಸ್ಥೆಗಳು ತಮ್ಮ ಅಗತ್ಯತೆಗಳನ್ನು ಈಡೇರಿಸಲು ನಿವೃತ್ತ ಸರಕಾರಿ ಅಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಸಲಹೆಗಾರರಾಗಿ ನೇಮಕಗೊಳಿಸುವ ಪರಿಪಾಠ ಇಟ್ಟುಕೊಂಡಿವೆ,'' ಎಂದು ವಿಜಿಲೆನ್ಸ್ ಆಯೋಗದ ಆದೇಶದಲ್ಲಿ ವಿವರಿಸಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿದ್ದ ಆಲಾಪನ್ ಬಂದೋಪಾಧ್ಯಾಯ ಪ್ರಕರಣದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ. ಕಳೆದ ತಿಂಗಳು ಪ್ರಧಾನಿ ನೇತೃತ್ವದಲ್ಲಿ ನಡೆದ ಚಂಡಮಾರುತ ಪರೀಶೀಲನಾ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರ ಸರಕಾರ ದಿಲ್ಲಿಗೆ ವಾಪಸ್ ಕರೆಸಿದ್ದರೂ ಅವರನ್ನು ಕಳುಹಿಸುವುದಿಲ್ಲವೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಾಖಂಡಿತವಾಗಿ ತಿಳಿಸಿದ್ದರು. ಮೇ 31ರಂದು ಬಂದೋಪಾಧ್ಯಾಯ ನಿವೃತ್ತರಾದ ಬೆನ್ನಲ್ಲೇ ಅವರನ್ನು ಮಮತಾ ಬ್ಯಾನರ್ಜಿ ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಕಗೊಳಿಸಿದ್ದರು.







