ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ನಿಧನ

ಕಲಬುರಗಿ, ಜೂ.4: ಹಿರಿಯ ಸಾಹಿತಿ, ಕವಿ, ಭಾಷಾ ಪಂಡಿತ ಪ್ರೊ.ವಸಂತ ಕುಷ್ಟಗಿ(85) ಇಂದು ಬೆಳಗ್ಗೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ಪ್ರೊ.ವಸಂತ ಕುಷ್ಟಗಿ ಕಳೆದೊಂದು ವಾರದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
'ಹಾರೈಕೆ' ಕವಿ ಎಂದೇ ಖ್ಯಾತರಾಗಿದ್ದ ಇವರು ಕಲ್ಯಾಣ ಕರ್ನಾಟಕದ ಐತಿಹಾಸಿಕ ಶತಮಾನ ಕಂಡ ಪ್ರತಿಷ್ಠಿತ ನೂತನ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.
1995ರಲ್ಲಿ ರಾಜ್ಯ ಎಸೆಸೆಲ್ಸಿ ಪಠ್ಯಕ್ರಮ ಪರಿಸ್ಕರಣೆಗೊಂಡ ಸಂದರ್ಭ ಪ್ರಥಮ ಭಾಷೆಯಾದ ಕನ್ನಡದ ಪದ್ಯಭಾಗದಲ್ಲಿ ಪ್ರೊ.ವಸಂತ ಕುಷ್ಟಗಿ ರಚಿತ ಪದ್ಯ 'ಹಾರೈಕೆ' ಮೊದಲ ಪಠ್ಯವಾಗಿತ್ತು. ಈ ಪದ್ಯದ ಮೂಲಕ ಕರುನಾಡಿನಾದ್ಯoತ ಅವರು ಮನೆಮಾತಾಗಿದ್ದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಕಾವ್ಯ, ಹತ್ತಾರು ಲೇಖನಗಳನ್ನು ನೀಡಿರುವ ಪ್ರೊ.ಕುಷ್ಟಗಿ, ವಿಶೇಷವಾಗಿ ದಾಸ ಸಾಹಿತ್ಯದಲ್ಲಿ ಕೃಷಿ ಮಹತ್ತರವಾದುದು.
ಹೈದರಾಬಾದ್ ನ ಉಸ್ಮಾನಿಯ ವಿಶ್ವವಿದ್ಯಾನಿಯಲದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದ ಅವರು 30ಕ್ಕೂ ಅಧಿಕ ಗದ್ಯ ಸಂಕಲನ, 8 ಕವನ ಸಂಕಲನ, 16ಕ್ಕೂ ಅಧಿಕ ಸಂಪಾದನೆ ಪುಸ್ತಕಗಳು, 22ಕ್ಕೂ ಅಧಿಕ ಸಂಪಾದಿಸಿದ ಗ್ರಂಥಗಳನ್ನು ರಚಿಸಿದ್ದಾರೆ.
ದಿವಂಗತ ಎನ್.ಧಮರ್ಸಿಂಗ್ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರೊ.ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.







