ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸಾರ್ವಕಾಲಿಕ ಗರಿಷ್ಠ ಏರಿಕೆ

ಹೊಸದಿಲ್ಲಿ: ಎರಡು ದಿನಗಳ ವಿರಾಮದ ನಂತರ, ಸರಕಾರಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಬೆಲೆಗಳನ್ನು ಪರಿಷ್ಕರಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ಸರಿಸುಮಾರು 27 ಪೈಸೆ ಹೆಚ್ಚಿಸಿದ್ದರೆ, ಡೀಸೆಲ್ ಬೆಲೆ 28 ಪೈಸೆ ಹೆಚ್ಚಾಗಿದೆ.
ಅಂತರ್ ರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಒಎಂಸಿಗಳು ಇಂಧನ ದರವನ್ನು ಹೆಚ್ಚಿಸುತ್ತಿವೆ. ಹೊಸ ಏರಿಕೆಯ ನಂತರ ದಿಲ್ಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 94.76 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 85.66 ರೂ.ಗೆ ಏರಿದೆ.
ಪ್ರಮುಖ ನಗರಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರೀ ಏರಿಕೆಯಾಗಿದೆ. ಈ ಎರಡು ಇಂಧನಗಳ ಬೆಲೆ ಕ್ರಮವಾಗಿ ಲೀಟರ್ ಗೆ 100.98 ರೂ. ಹಾಗೂ ಲೀಟರ್ ಗೆ 92.99 ರೂ. ತಲುಪಿದೆ.
ಹೆಚ್ಚಿನ ಜಿಲ್ಲೆಗಳಲ್ಲಿ ಈಗ ಪೆಟ್ರೋಲ್ ಪ್ರತಿ ಲೀಟರ್‌ಗೆ 94 ರೂ.ಗೂ ಅಧಿಕ ಏರಿಕೆಯಾಗಿದೆ. ರಾಜಸ್ಥಾನದ ಶ್ರೀ ಗಂಗನಗರದಲ್ಲಿ ಪೆಟ್ರೋಲ್‌ಗೆ ಅತಿ ಹೆಚ್ಚು ಚಿಲ್ಲರೆ ದರ ಪ್ರತಿ ಲೀಟರ್‌ಗೆ 105.28 ರೂ. ಇದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಇನ್ನೂ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿದೆ.







