20,000 ಕೋಟಿ ರೂ. ಮೊತ್ತದ 2ನೇ ಕೋವಿಡ್ ಪ್ಯಾಕೇಜ್ ಘೋಷಿಸಿದ ಕೇರಳ ಸರಕಾರ

ಪಿಣರಾಯಿ ವಿಜಯನ್
ತಿರುವನಂತಪುರಂ: ಕೋವಿಡ್ 2ನೇ ಅಲೆ ತಂದೊಡ್ಡಿರುವ ಸಮಸ್ಯೆಗಳನ್ನು ನಿಭಾಯಿಸಲು ಕೇರಳ ಸರಕಾರ ರೂ. 20,000 ಕೋಟಿಯ ಎರಡನೇ ಕೋವಿಡ್ ಪ್ಯಾಕೇಜ್ ಅನ್ನು ಇಂದು ಘೋಷಿಸಿದೆ.
ಕೇರಳ ವಿತ್ತ ಸಚಿವ ಕೆ ಎನ್ ಬಾಲಗೋಪಾಲ್ ಅವರು ಇಂದು ಪಿಣರಾಯಿ ವಿಜಯನ್ ಸರಕಾರದ ಎರಡನೇ ಅವಧಿಯ ಮೊದಲ ಬಜೆಟ್ ಮಂಡನೆ ವೇಳೆ ಈ ಪ್ಯಾಕೇಜ್ ಘೋಷಿಸಿದ್ದಾರೆ.
ಈ ರೂ. 20,000 ಕೋಟಿ ಪ್ಯಾಕೇಜ್ ಹೊರತಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡಲು ರೂ. 1,000 ಕೋಟಿ ಮೀಸಲಿರಿಸಲಾಗಿದೆ. ಉಚಿತ ಕೋವಿಡ್ ಲಸಿಕೆ ನೀಡಲು ಅಗತ್ಯ ಸವಲತ್ತು ಹಾಗೂ ಸೌಕರ್ಯಗಳನ್ನು ಒದಗಿಸಲು ಹೆಚ್ಚುವರಿ ರೂ. 500 ಕೋಟಿ ಕೂಡ ವ್ಯಯಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಹಿಂದಿನ ಅಧಿಕಾರಾವಧಿಯಲ್ಲಿ ಎಡರಂಗ ಸರಕಾರ ಘೋಷಿಸಿದ್ದ ಮೊದಲನೇ 20,000 ಕೋಟಿ ರೂ. ಕೋವಿಡ್ ಪ್ಯಾಕೇಜ್ ಅನ್ನು ಸಂಪೂರ್ಣವಾಗಿ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂಭಾವ್ಯ ಮೂರನೇ ಅಲೆ ತಂದೊಡ್ಡಬಹುದಾದ ಸಮಸ್ಯೆಗಳನ್ನೂ ಸರಕಾರ ಅವಲೋಕಿಸಲಿದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಕಡಲ್ಕೊರೆತ ಹಾಗೂ ತೀವ್ರ ಮಳೆಯಿಂದ ಕರಾವಳಿ ಪ್ರದೇಶಗಳಲ್ಲಿ ಸಂಭವಿಸಿದ ಹಾನಿಗೆ ಸಂಬಂಧಿಸಿದಂತೆಯೂ ಒಂದು ಪ್ಯಾಕೇಜ್ ಅನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ಹಿಂದಿನ ವಿತ್ತ ಸಚಿವ ಟಿ ಎಂ ಥಾಮಸ್ ಅವರು ಜನವರಿ 15ರಂದು ಮಂಡಿಸಿದ್ದ ಆರ್ಥಿಕ ವರ್ಷ 2021-22ರ ಬಜೆಟ್ಗೆ ಕೆಲವೊಂದು ಸೇರ್ಪಡೆಗಳನ್ನು ಮಾಡಿ ಇಂದು ಪರಿಷ್ಕೃತ ಬಜೆಟ್ ಮಂಡಿಸಲಾಗಿದೆ.







