ಸರಕಾರಕ್ಕೆ ತಾಕತ್ತಿದ್ದರೆ ಅಧಿಕಾರಿಗಳ ಬಹಿರಂಗ ಸಂಘರ್ಷಕ್ಕೆ ಕಡಿವಾಣ ಹಾಕಲಿ: ಕುಮಾರಸ್ವಾಮಿ

ಬೆಂಗಳೂರು, ಜೂ.4: ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಪಾಲಿಕೆ ಆಯುಕ್ತರ ನಡುವೆ ನಡೆಸುತ್ತಿರುವ ಹಾದಿ- ಬೀದಿ ಜಗಳ ನೋಡಿದರೆ, ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿದಿಯೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಈ ಇಬ್ಬರು ಐಎಎಸ್ ಅಧಿಕಾರಿಗಳು ಇಷ್ಟೊಂದು ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸುತ್ತ ಸರಕಾರಕ್ಕೆ ಮುಜುಗರ ಸೃಷ್ಟಿಸುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಏನು ಮಾಡುತ್ತಿದ್ದಾರೆ? ಮಹಿಳಾ ಅಧಿಕಾರಿಗಳ ಜಗಳದಲ್ಲಿ ಜನಪ್ರತಿನಿಧಿಗಳು ಪರ ವಿರೋಧದ ಹೇಳಿಕೆಗಳನ್ನು ನೀಡಿ ತಮ್ಮ ಬಾಯಿಚಪಲ ತೀರಿಸಿ ಕೊಳ್ಳುತ್ತಿದ್ದಾರೆ. ಆದರೆ ಸರಕಾರ ದಿವ್ಯ ಮೌನಕ್ಕೆ ಶರಣಾಗಿದೆ. ಹೀಗೆ ಅಧಿಕಾರಿಗಳ ನಡುವೆ ಸಮನ್ವಯ ಇಲ್ಲದೆ ಪರಸ್ಪರ ಕಿತ್ತಾಡಿಕೊಂಡರೆ ಬೇರೆ ಬೇರೆ ಇಲಾಖೆಯಲ್ಲಿರುವವರು ನಾಳೆ ಇದೇ"ಹಾದಿ" ತುಳಿದರೆ ರಾಜ್ಯದ ಪರಿಸ್ಥಿತಿ ಏನಾಗಬಾರದು? ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಸರಕಾರ ಇಬ್ಬರೂ ಅಧಿಕಾರಿಗಳ "ಬಾಯಿಗೆ ಬೀಗ" ಹಾಕುವಂತಹ ಧೈರ್ಯವನ್ನಾದರೂ ತೋರಲಿ. ಇಲ್ಲದಿದ್ದರೆ, ನಾಳೆ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಮರ್ಯಾದೆ ಹರಾಜಾದರೆ ಅದಕ್ಕೆ ಈಗಿನ ಸರಕಾರವೇ ಕಾರಣವಾಗಲಿದೆ. ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿಯ ಜೀವ ಬಲಿ ಪಡೆಯಲಾಯಿತು. ಅಂತಹದೇ ಪರಿಸ್ಥಿತಿ ಮೈಸೂರಿನಲ್ಲೂ ನಿರ್ಮಾಣವಾಗಿದೆ. ಅಮಾಯಕರನ್ನು ಬಲಿ ಪಡೆಯುವ ದೊಡ್ಡ ಅನಾಹುತ ಸಂಭವಿಸುವ ಮೊದಲು ಸರಕಾರ ತನ್ನ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಅಧಿಕಾರಿಗಳಿಬ್ಬರ ನಡುವಣ ಸಂಘರ್ಷ ಐದಾರು ತಿಂಗಳಿಂದ ನಡೆಯುತ್ತಿದೆ. ಮುಖ್ಯಮಂತ್ರಿ ಅಥವಾ ಸರಕಾರದ ದೌರ್ಬಲ್ಯದ ಕಾರಣದಿಂದಲೇ ಅಧಿಕಾರಿಗಳು ಸೂಪರ್ಮ್ಯಾನ್ ಗಳಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಜಟಾಪಟಿಯನ್ನು ಸರಕಾರ ಲಘುವಾಗಿ ಪರಿಗಣಿಸಿದಂತಿದೆ. ಮೂಡ ಕಮಿಷನರ್ 12 ಕೋಟಿ ರೂಪಾಯಿಗಿಂತ ಸಿಎಸ್ಆರ್ಎಫ್ ಹೆಚ್ಚು ಹಣದ ಲೆಕ್ಕ ಕೊಟ್ಟಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಆರೋಪಿಸಿದರೆ, 42 ಕೋಟಿ ರೂಪಾಯಿ ಮಿಗಿಲಾದ ಹಣದ ದುರ್ಬಳಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಿರುದ್ಧ ಬಿಜೆಪಿ ಸಂಸದ ಅಬ್ಬರಿಸುತ್ತಾರೆ. ಕೋಟ್ಯಂತರ ರೂಪಾಯಿಗಳ ಆವ್ಯವಹಾರದ ಕಡು ಭ್ರಷ್ಟಾಚಾರದ ವಾಸನೆ ಗಬ್ಬೆದ್ದು ನಾರುತ್ತಿದ್ದರೂ ಸರಕಾರ ಕಂಡು ಕಾಣದಂತೆ ವರ್ತಿಸುತ್ತಿರುವುದರ ಮರ್ಮವೇನು? ಎಂದು ತೀಕ್ಷ್ಣವಾಗಿ ಪ್ರಶ್ನೆ ಮಾಡಿದ್ದಾರೆ.
ಇದು ಮುಖ್ಯಮಂತ್ರಿಯ ದೌರ್ಬಲ್ಯವೋ? ಸರಕಾರದ ಉನ್ನತ ಅಧಿಕಾರಿಗಳ ದೌರ್ಬಲ್ಯವೋ? ಯಾರನ್ನು ಓಲೈಸಲು ಅಥವಾ ದೌರ್ಬಲ್ಯ ಮುಚ್ಚಿಕೊಳ್ಳಲು ಸರಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದೆ? ಸರಕಾರಕ್ಕೇನಾದರೂ ಕಿಂಚಿತ್ತು ಮಾನ ಮರ್ಯಾದೆ ಇದೆಯೇ? 'ಪ್ರಜಾಪ್ರಭುತ್ವದ ಮೂರು ಮಂಗಗಳು' ನಾಚುವಂತೆ ವರ್ತಿಸುತ್ತಿರುವ ಸರಕಾರದ ಎಡಬಿಡಂಗಿತನ ಮತ್ತು ಮಹಾಮೌನ ಕಂಡು ಜನತೆ ಹಾದಿ ಬೀದಿಯಲ್ಲಿ ನಗುವಂತಾಗಿದೆ. ಮುಖ್ಯಮಂತ್ರಿ ಮತ್ತು ಸರಕಾರಕ್ಕೆ ತಾಕತ್ತಿದ್ದರೆ ಬಹಿರಂಗ ಸಂಘರ್ಷಕ್ಕೆ ಕಡಿವಾಣ ಹಾಕಲಿ. ಇಲ್ಲ ಅಧಿಕಾರ ಬಿಟ್ಟು ತೊಲಗಲಿ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಪಾಲಿಕೆ ಆಯುಕ್ತರ ನಡುವೆ ನಡೆಸುತ್ತಿರುವ ಹಾದಿ- ಬೀದಿ ಜಗಳ ನೋಡಿದರೆ, ರಾಜ್ಯದಲ್ಲಿ ಸರಕಾರ ಅಸ್ಥಿತ್ವದಲ್ಲಿದಿಯೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
— H D Kumaraswamy (@hd_kumaraswamy) June 4, 2021
1/10







