ಸಿಎಂ ತವರು ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ಗಳು ಅವ್ಯವಸ್ಥೆ ಆಗರ: ಆರೋಪ

ಶಿವಮೊಗ್ಗ, ಜೂ.14: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ತವರು ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಸ್ಥಾಪಿತ ಕೋವಿಡ್ ಕೇರ್ ಸೆಂಟರ್‌ಗಳು ಅವ್ಯವಸ್ಥೆಯ ಆಗರವಾಗಿದೆ ಹಾಗೂ ಸೋಂಕಿತರಿಗೆ ಗುಣಮಟ್ಟದ ಆಹಾರವನ್ನು ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಗರದ ಹೊರವಲಯದ ಮಲ್ಲಿಗೆಹಳ್ಳಿಯ ದೇವರಾಜ ಅರಸ್ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಹಾಗೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ, ಈ ಎರಡು ಹಾಸ್ಟೆಲ್‌ಗಳು ಅವ್ಯವಸ್ಥೆಯ ಆಗರವಾಗಿವೆ. ಕೋವಿಡ್ ಕೇರ್ ಸೆಂಟರ್ ಮುಂದೆ ರಾಶಿರಾಶಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕಸದ ಬುಟ್ಟಿ ಆಗಿಂದಾಗ್ಗೆ ಖಾಲಿ ಮಾಡುತ್ತಿಲ್ಲ. ಸೋಂಕಿತರು ಆಹಾರ ಸೇವಿಸಿದ ನಂತರ ಅಳಿದುಳಿದ ಆಹಾರ ಪದಾರ್ಥಗಳನ್ನು ಅಕ್ಕಪಕ್ಕದಿಂದ ಬರುವ ನಾಯಿಗಳು, ದನಕರುಗಳು ಇದನ್ನು ತಿನ್ನುತ್ತಿವೆ ಎಂದು ಆರೋಪಿಸುತ್ತಿದ್ದಾರೆ.
ಬೆಡ್ ಶೀಟ್‌ಗಳನ್ನು ಒಗೆದಿದ್ದು ಯಾವಾಗ: ಶೌಚಾಲಯವನ್ನು ಕ್ಲೀನ್ ಮಾಡಿದ್ದನ್ನು ಇಲ್ಯಾರು ಕಂಡಿಲ್ಲ ಎಂದು ಸೋಂಕಿತರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಈ ನಡುವೆ ಕೊಠಡಿಗಳ ಕ್ಲೀನಿಂಗ್ ವಿಚಾರ ದೂರದ ಮಾತು. ಅಲ್ಲಿದ್ದರವರೆ ಕ್ಲೀನ್ ಮಾಡಿ ಮಲಗುತ್ತಿದ್ದಾರೆ. ಬೆಡ್ ಶೀಟ್‌ಗಳನ್ನು ಒಗೆದಿದ್ದು ಯಾವಾಗ ಅನ್ನುವುದು ಗೊತ್ತಿಲ್ಲ. ನಾವೆ ಒಗೆದುಕೊಳ್ಳುತ್ತೇವೆ ಅಂದರೂ ವ್ಯವಸ್ಥೆ ಮಾಡುತ್ತಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆರೋಪ ಮಾಡಿದ್ದಾರೆ.
ನಾವೇ ಊಟ ತಯಾರಿಸುತ್ತೇವೆ: ಕೊರೋನ ಸೋಂಕಿತರಿಗೆ ಪೌಷ್ಟಿಕ ಆಹಾರ ಬೇಕು. ಆದರೆ ಇಲ್ಲಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪ್ರತಿದಿನ ಒಂದೇ ಬಗೆಯ ಊಟ, ಒಂದೇ ರೀತಿಯ ಸಾಂಬಾರು, ಪಲ್ಯ ನೀಡಲಾಗುತ್ತಿದೆ. ಆದ್ದರಿಂದ ಮನೆಗೆ ಕಳುಹಿಸಿದರೆ ನಾವೇ ಪೌಷ್ಟಿಕಾಂಶಯುಕ್ತ ಆಹಾರ ತಯಾರಿಸಿಕೊಳ್ಳುತ್ತೇವೆ ಅನ್ನುತ್ತಾರೆ ಇಲ್ಲಿರುವ ಕೊರೋನ ಸೋಂಕಿತ ಮಹಿಳೆಯರು.
ಕೋವಿಡ್ ಕೇರ್ ಸೆಂಟರ್ ನಲ್ಲಿ ವೈದ್ಯಕೀಯ ವ್ಯವಸ್ಥೆ ಚೆನ್ನಾಗಿದೆ. ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕೇರ್ ಸೆಂಟರ್‌ನಲ್ಲಿರುವವರ ಅಭಿಪ್ರಾಯ.
ಸೋಂಕಿನ ಗುಣ ಲಕ್ಷಣವಿಲ್ಲದಿದ್ದರೂ ಕೊರೋನ ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್ ಸೇರಬೇಕು ಅಂತಾ ಕಟ್ಟಪ್ಪಣೆ ಹೊರಡಿಸುವ ಜಿಲ್ಲಾಡಳಿತ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.








