ಕೋವಿಡ್ ಲಸಿಕೆ ಸೋರಿಕೆ : ಕಾಂಗ್ರೆಸ್ ಆರೋಪ

ಮಂಗಳೂರು, ಜೂ.4: ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಇದುವರೆಗೆ ಕಳೆದ ನಾಲ್ಕು ತಿಂಗಳಲ್ಲಿ ಉತ್ಪಾದನೆ ಆಗಿರುವ 34 ಕೋಟಿ ಲಸಿಕೆಯಲ್ಲಿ ಸುಮಾರು ಏಳು ಕೋಟಿ ಲಸಿಕೆ ನಾಪತ್ತೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ವೈದ್ಯರ ಘಟಕ ಆರೋಪಿಸಿದೆ.
ಈ ಬಗ್ಗೆ ಮಾತನಾಡಿದ ಘಟಕದ ಅಧ್ಯಕ್ಷ ಡಾ. ಶೇಖರ್ ಪೂಜಾರಿ, ದೇಶದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರಿಗೂ ಉಚಿತವಾಗಿ ಕೋವಿಡ್ ನಿರೋಧಕ ಲಸಿಕೆ ನೀಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ ಎಂದರು.
ದೇಶದಲ್ಲಿ ಉತ್ಪಾದನೆಯಾದ 34 ಕೋಟಿ ಲಸಿಕೆಯಲ್ಲಿ 21 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಹಾಗಾದರೆ ಉಳಿದ ಲಸಿಕೆ ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಸಹಾಯಕರಿಗೆ ಕೇವಲ 2000 ರೂ. ಘೋಷಣೆ ಮಾಡಲಾಗಿದೆ. ಅದು ಯಾವುದಕ್ಕೂ ಸಾಲದು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಶುಭೋದಯ ಆಳ್ವ ಹೇಳಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಕಾಂಗ್ರೆಸ್ ಮುಖಂಡರಾದ ಗಣೇಶ ಪೂಜಾರಿ, ನಿತ್ಯಾನಂದ ಶೆಟ್ಟಿ, ಯೋಗೀಶ್ ಕುಮಾರ್, ಆರಿಫ್ ಬಾವಾ ಉಪಸ್ಥಿತರಿದ್ದರು.





