ಕೋವಿಡ್ ತಡೆ ಲಸಿಕೆ ಗೊಂದಲ ನಿವಾರಿಸಿ : ಯು.ಟಿ.ಖಾದರ್

ಮಂಗಳೂರು, ಜೂ. 4: ಕೋವಿಡ್ ತಡೆ ಲಸಿಕೆ ಸಮಸ್ಯೆಯನ್ನು ನಿವಾರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದ್ದು, ದೇಶದಲ್ಲಿ ಎಷ್ಟು ಲಸಿಕೆ ತಯಾರಾಗುತ್ತದೆ, ಎಷ್ಟು ಪೂರೈಕೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸಿ ಗೊಂದಲ ನಿವಾರಿಸಿ ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಲಸಿಕೆಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ಲಕ್ಷವನ್ನು ವಿರೋಧಿಸಿ, ಲಸಿಕೆ ಬಗ್ಗೆ ಪಾರದರ್ಶಕತೆಯನ್ನು ತರಬೇಕು ಎಂದು ಆಗ್ರಹಿಸಿ ‘ಸ್ಪೀಕ್ ಅಪ್ ಇಂಡಿಯಾ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರ ನಿಮಿತ್ತ ಕಾಂಗ್ರೆಸ್ ನಿಯೋಗ ದ.ಕ. ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ ಎಂದವರು ಹೇಳಿದರು.
ತೌಕ್ತೆ ಚಂಡಮಾರುತದಿಂದ ಉಳ್ಳಾಲ ಕಡಲಕಿನಾರೆಯಿಂದ ಸಸಿಹಿತ್ಲುವರೆಗೆ ಹಲವಾರು ಮನೆಗಳು ಹಾನಿಗೀಡವಾಗಿವೆ. ಅಲ್ಲಿಗೆ ಭೇಟಿ ನೀಡಿದ್ದ ಸಚಿವರು ತಕ್ಷಣ ಪರಿಹಾರ ನೀಡುವುದಾಗಿ ಹೇಳಿ 15 ದಿನಗಳಾದರೂ ಯಾವುದೇ ಕ್ರಮ ಆಗಿಲ್ಲ. ಅಪಾಯದಲ್ಲಿರುವ ಮನೆಗಳ ರಕ್ಷಣೆ ಮಾಡಲಾಗಿಲ್ಲ. ಸರಕಾರ ಕ್ರಮ ವಹಿಸದಿದ್ದರೆ ಕಾಂಗ್ರೆಸ್‌ನಿಂದ ಪ್ರತಿಭಟಿಸುವುದಾಗಿ ಯು.ಟಿ.ಖಾದರ್ ಹೇಳಿದರು.
ಸರಕಾರದ ಶೈಕ್ಷಣಿಕ ಗೊಂದಲ: ಹೆತ್ತವರಿಗೆ ಆತಂಕ
ದ್ವಿತೀಯ ಪಿಯುಸಿ ರದ್ದುಪಡಿಸಿ, ಎಸೆಸೆಲ್ಸಿ ಪರೀಕ್ಷೆ ನಡೆಸುವುದಾಗಿ ಹೇಳುವ ರಾಜ್ಯ ಸರಕಾರದ ಗೊಂದಲದ ಹೇಳಿಕೆಯು ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಆತಂಕಕ್ಕೀಡು ಮಾಡುವಂತೆ ಮಾಡಿದೆ. ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದರೆ, ಸಿಇಟಿ, ನರ್ಸಿಂಗ್ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಬಯಸುವ ವಿದ್ಯಾರ್ಥಿಗಳ ಪಾಡೇನು ಎಂದು ಅವರು ಪ್ರಶ್ನಿಸಿದರು.
ತೌಕ್ತೆ ಚಂಡಮಾರುತದಿಂದ ಮುಲ್ಕಿ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಈ ಹಿಂದೆ ಸುಮಾರು ಏಳೆಂಟು ಕೋಟಿರೂ. ವೆಚ್ಚದಲ್ಲಿ ಹಾಕಲಾಗಿದ್ದ ತಡೆಗೋಡೆ ನೀರು ಪಾಲಾಗಿದೆ. ಮನೆಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಪರಿಹಾರವನ್ನು ನೀಡಲಾಗಿಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಡೀಸೆಲ್ ಬೆಲೆ ಏರಿಕೆಯಿಂದ ಮೀನುಗಾರರು ತತ್ತರಿಸಿದ್ದು, ಅವರಿಗೆ ಸಿಗುವ ಡೀಸೆಲ್ ಸಬ್ಸಿಡಿಯೂ ದೊರಕಿಲ್ಲ. ಸರಕಾರ ಇನ್ನಾದರೂ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.
ಮುಖಂಡರಾದ ಸದಾಶಿವ ಉಳ್ಳಾಲ್, ಶುಭೋದಯ ಆಳ್ವ, ಲುಕ್ಮಾನ್ ಬಂಟ್ವಾಳ, ಮಹಾಬಲ ಮಾರ್ಲ, ನಿತ್ಯಾನಂದ ಶೆಟ್ಟಿ, ಲಾರೆನ್ಸ್ ಡಿಸೋಜಾ, ಶೇಖರ ಪೂಜಾರಿ, ನವೀನ್ ಡಿಸೋಜಾ, ವಸಂತ ಬರ್ನಾಡ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸರಿಂದ ಅತಿರೇಕದ ವರ್ತನೆ: ಹರೀಶ್ ಕುಮಾರ್
ಸಾಮಾಜಿತ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ ಕಾರಣಕ್ಕೆ ಪಕ್ಷದ ಯುವ ವಕೀಲರೊಬ್ಬರ ಸಹಿತ ನಾಲ್ವರನ್ನು ಬಂಧಿಸಿರುವುದು ಖಂಡನೀಯ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಅತಿರೇಕದ ವರ್ತನೆ ತೋರುತ್ತಿದ್ದಾರೆ ಎಂದು ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.
ಕೊಲೆ ಆರೋಪಿಗಳನ್ನು ಕೂಡಾ ಈ ರೀತಿಯಾಗಿ ಬಂಧಿಸಿ ಮಾಧ್ಯಮಕ್ಕೆ ಫೋಟೋಗಳನ್ನು ಬಿಡುಗಡೆ ಮಾಡುವುದಿಲ್ಲ. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡಬಾರದು. ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ಪಾರ್ವಡ್ ಮಾಡುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಕೂಡಾ ಹೇಳಿದೆ. ಹೀಗಿರುವಾಗ ಪೊಲೀಸರು ವಿಶೇಷ ಆಸಕ್ತಿ ವಹಿಸಿ ರಾತ್ರೋರಾತ್ರಿ ಬಂಧಿಸುವ ಅಗತ್ಯ ಏನಿತ್ತು ಎಂದವರು ಪ್ರಶ್ನಿಸಿದ್ದಾರೆ.







