5ಜಿ ಟೆಲಿಕಾಂ ತಂತ್ರಜ್ಞಾನ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್
ಇದೊಂದು ಪ್ರಚಾರ ಪಡೆಯುವ ಪ್ರಯತ್ನ ಎಂದ ನ್ಯಾಯಾಲಯ

ಹೊಸದಿಲ್ಲಿ,ಜೂ.4: 5ಜಿ ತಂತ್ರಜ್ಞಾನದ ಅನುಷ್ಠಾನದ ವಿರುದ್ಧ ಬಾಲಿವುಡ್ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಅರ್ಜಿಯನ್ನು ‘ಪ್ರಚಾರ ತಂತ್ರ’ಎಂದು ಬಣ್ಣಿಸಿದ ನ್ಯಾಯಾಲಯವು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕಾಗಿ ಚಾವ್ಲಾ ಮತ್ತು ಇತರರಿಗೆ 20 ಲ.ರೂ.ಗಳ ದಂಡವನ್ನೂ ವಿಧಿಸಿದೆ.
ಈ ಅರ್ಜಿಯು ಪ್ರಚಾರ ತಂತ್ರವಾಗಿರುವಂತೆ ಕಂಡು ಬರುತ್ತಿದೆ ಎಂದು ತನ್ನ ಆದೇಶದಲ್ಲಿ ಹೇಳಿರುವ ಉಚ್ಚ ನ್ಯಾಯಾಲಯವು, ಅರ್ಜಿದಾರರಾದ ಜೂಹಿ ಚಾವ್ಲಾ ಅವರು ವರ್ಚುವಲ್ ವಿಚಾರಣೆಯ ಲಿಂಕ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು ಮತ್ತು ಇದರಿಂದ ವಿಚಾರಣೆಗೆ ಮೂರು ಸಲ ವ್ಯತ್ಯಯವುಂಟಾಗಿತ್ತು ಎಂದು ಹೇಳಿದೆ. ವಿಚಾರಣೆಗೆ ವ್ಯತ್ಯಯವನ್ನುಂಟು ಮಾಡಿದ್ದ ವ್ಯಕ್ತಿಗಳನ್ನು ಗುರುತಿಸುವಂತೆ ಮತ್ತು ಅವರ ವಿರುದ್ಧ ಕ್ರಮ ಜರುಗಿಸುವಂತೆ ಅದು ದಿಲ್ಲಿ ಪೊಲೀಸರಿಗೆ ನಿರ್ದೇಶ ನೀಡಿದೆ.
ದೇಶದಲ್ಲಿ 5ಜಿ ನಿಸ್ತಂತು ಜಾಲದ ಸ್ಥಾಪನೆಯ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದ ನಟಿ-ಪರಿಸರವಾದಿ ಚಾವ್ಲಾ,5ಜಿ ತಂತ್ರಜ್ಞಾನವು ಮಾನವರು,ಪ್ರಾಣಿಗಳು,ಸಸ್ಯಗಳು ಮತ್ತು ಪ್ರತಿಯೊಂದು ಜೀವಿಗೂ ಹೇಗೆ ಸುರಕ್ಷಿತವಾಗಿದೆ ಎನ್ನುವುದನ್ನು ಸಾರ್ವಜನಿಕರಿಗೆ ಪ್ರಮಾಣೀಕರಿಸಲು ಅಧಿಕಾರಿಗಳಿಗೆ ನಿರ್ದೇಶ ನೀಡುವಂತೆ ಕೋರಿದ್ದರು.ಇದಕ್ಕೂ ಮೊದಲಿನ ವಿಚಾರಣೆಯ ಸಂದರ್ಭ ಅರ್ಜಿಯು ದೋಷಯುಕ್ತವಾಗಿದೆ ಮತ್ತು ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಅದನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದ ನ್ಯಾಯಾಲಯವು,ಅರ್ಜಿದಾರಾದ ಚಾವ್ಲಾ,ವೀರೇಶ ಮಲಿಕ್ ಮತ್ತು ಟೀನಾ ವಚಾನಿ ಅವರು ತಂತ್ರಜ್ಞಾನಕ್ಕೆ ಸಂಬಂಧಿಸಿ ತಮ್ಮ ಕಳವಳಗಳನ್ನು ಸರಕಾರದ ಗಮನಕ್ಕೆ ತಾರದೇ ನೇರವಾಗಿ ದಾವೆಯನ್ನು ದಾಖಲಿಸಿದ್ದನ್ನು ಪ್ರಶ್ನಿಸಿತ್ತು. ದೂರಿನಲ್ಲಿ 33 ಕಕ್ಷಿಗಳನ್ನು ಸೇರಿಸಿದ್ದು ಏಕೆ ಎಂದೂ ಪ್ರಶ್ನಿಸಿದ್ದ ಅದು ಕಾನೂನಿನಡಿ ಇದಕ್ಕೆ ಅವಕಾಶವಿಲ್ಲ ಎಂದು ತಿಳಿಸಿತ್ತು.