ಉತ್ತರ ಪ್ರದೇಶದ ಗೋರಖ್ ನಾಥ ಮಂದಿರದ ಸಮೀಪದ ತಮ್ಮ ಮನೆಗಳನ್ನು ತೆರವುಗೊಳಿಸುವಂತೆ 11 ಮುಸ್ಲಿಂ ಕುಟುಂಬಗಳಿಗೆ ಸೂಚನೆ
ಸುರಕ್ಷತೆಯ ಕಾರಣ

(Photo source: The Quint/Maanvi)
ಹೊಸದಿಲ್ಲಿ,ಜೂ.4: ಸುರಕ್ಷತೆಯ ಉದ್ದೇಶಕ್ಕಾಗಿ ಗೋರಖ್ಪುರದ ಗೋರಖ್ ನಾಥ ಮಂದಿರದ ಸಮೀಪದಲ್ಲಿರುವ ತಮ್ಮ ಮನೆಗಳನ್ನು ತೆರವುಗೊಳಿಸಿ ಉತ್ತರ ಪ್ರದೇಶ ಸರಕಾರದ ಸ್ವಾಧೀನಕ್ಕೆ ನೀಡುವಂತೆ ಅಲ್ಲಿಯ 11 ಮುಸ್ಲಿಂ ಕುಟುಂಬಗಳಿಗೆ ಸೂಚಿಸಲಾಗಿದೆ ಎಂದು ಸುದ್ದಿ ಜಾಲತಾಣ The Quint ವರದಿ ಮಾಡಿದೆ.
ಸರಕಾರದೊಡನೆ ಒಪ್ಪಂದಪತ್ರದಲ್ಲಿ 11 ಜನರನ್ನು ಹೆಸರಿಸಲಾಗಿದ್ದು, ಎಲ್ಲರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪೈಕಿ 10 ಕುಟುಂಬಗಳು 2021,ಮೇ 28ರಂದು ಒಪ್ಪಂದಕ್ಕೆ ಸಹಿ ಹಾಕಿವೆ. ಎರಡು ಕುಟುಂಬಗಳು ತಾವು ಒತ್ತಡಕ್ಕೆ ಮಣಿದು ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ತಿಳಿಸಿದ್ದರೆ, ತಮ್ಮ ಭೂಮಿಯನ್ನು ಬಿಟ್ಟುಕೊಡಲು ಯಾವುದೇ ಸಮಸ್ಯೆಯಿಲ್ಲ ಎಂದು ಇತರ ಕುಟುಂಬಗಳು ತಿಳಿಸಿವೆ. ಒಂದು ಕುಟುಂಬವು ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ ಮತ್ತು ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ವರದಿಯಾಗಿದೆ.
ಒಪ್ಪಂದಕ್ಕೆ ಸಹಿ ಹಾಕುವಂತೆ ಯಾರನ್ನೂ ಬಲವಂತಗೊಳಿಸಿಲ್ಲ, ಬೇಕಾದರೆ ಈಗಲೂ ಅವರು ಒಪ್ಪಂದದಿಂದ ಹಿಂದಕ್ಕೆ ಸರಿಯಬಹುದು ಎಂದು ಹೇಳಿದ ಗೋರಖ್ಪುರ ಜಿಲ್ಲಾಧಿಕಾರಿ ವಿಜೇಂದ್ರ ಪಾಂಡಿಯನ್ ಅವರು, ಈ ಜನರು ತಮ್ಮ ಭೂಮಿಗಾಗಿ ಕೋಟ್ಯಂತರ ರೂ.ಗಳನ್ನು ಪಡೆಯಲಿದ್ದಾರೆ ಎಂದರು.
ಯೋಜನೆಯು ಇನ್ನೂ ಶೈಶವಾವಸ್ಥೆಯಲ್ಲಿದೆ ಎಂದು ಜಿಲ್ಲಾಡಳಿತವು ಹೇಳಿದರೆ,ಯಾವುದೇ ಬಲವಂತದ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಪ್ರದೇಶದಲ್ಲಿನ ನಿವಾಸಿಗಳು ಹೇಳಿದ್ದಾರೆ.
“ಈ ಪರಿಸರದಲ್ಲಿ ಹಿಂದೂಗಳ ಮನೆಗಳಿಲ್ಲ. ಭೂಮಿಯನ್ನು ಬಿಟ್ಟು ಕೊಡುವಂತೆ 11 ಮುಸ್ಲಿಂ ಕುಟುಂಬಗಳಿಗೆ ಸೂಚಿಸಲಾಗಿದೆ. ನಾವಿಲ್ಲಿ 125 ವರ್ಷಗಳಿಗೂ ಹೆಚ್ಚು ಸಮಯದಿಂದ ವಾಸವಿದ್ದೇವೆ. ಕೆಲವು ಕುಟುಂಬಗಳು ಇಲ್ಲಿಂದ ಹೋಗಲು ಸಿದ್ಧವಾಗಿವೆ. ಅವರಿಗೆ ಸಾಧ್ಯವಿದ್ದರೆ ಖಂಡಿತ ಹೋಗಲಿ,ಆದರೆ ನನ್ನಂತಹ ಬಡವರು ಎಲ್ಲಿಗೆ ಹೋಗಬೇಕು” ಎಂದು ಮುಷೀರ್ ಅಹ್ಮದ್(73) ಪ್ರಶ್ನಿಸಿದರು. ಮಂದಿರದ ಸುರಕ್ಷತೆಗಾಗಿ ಪೊಲೀಸ್ ಚೌಕಿಯನ್ನು ನಿರ್ಮಿಸಲಾಗುವುದು ಮತ್ತು ಇದಕ್ಕಾಗಿ ನಮ್ಮನ್ನು ತೆರವುಗೊಳಿಸಲಾಗುತ್ತದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅದರೆ ಇಲ್ಲಿ ಈಗಾಗಲೇ ಎರಡು ಪೊಲೀಸ್ ಚೌಕಿಗಳಿವೆ. ಹೀಗಾಗಿ ವಿನಾಕಾರಣ ನಮ್ಮನ್ನು ಇಲ್ಲಿಂದ ತೆರವುಗೊಳಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ಜಾವೇದ್ ಅಖ್ತರ್ (71) The Quint ಗೆ ತಿಳಿಸಿದ್ದಾರೆ.
ಬೇರೆ ಕಡೆಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಅಹ್ಮದ್ ಮತ್ತು ಅಖ್ತರ್ ಬಳಿ ಭೂಮಿಯಿಲ್ಲ. ತಾವು ಒತ್ತಡಕ್ಕೆ ಮಣಿದು ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ಅವರು ತಿಳಿಸಿದರು. ಜೂ.2ರಂದು ಆಡಳಿತವು ಸಭೆಯನ್ನು ಕರೆದಿತ್ತಾದರೂ ತಾವು ಹೋಗಿರಲಿಲ್ಲ ಎಂದು ಹೇಳಿದ ಅಹ್ಮದ್ ಮತ್ತು ಅಖ್ತರ್,ವಕೀಲರ ಬಳಿ ಮಾತನಾಡಿದ ಬಳಿಕ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ ಎಂದರು.
“ಈ ಜನರು ತಮ್ಮ ಸ್ವಂತ ಇಚ್ಛೆಯಿಂದ ಒಪ್ಪಂದಕ್ಕೆ ಸಹಿ ಹಾಕಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿವೆ. ಒತ್ತಡ ಮತ್ತು ಬೆದರಿಕೆಯ ಆರೋಪಗಳಿಗೆ ಉತ್ತರವಾಗಿ ಈ ಪುರಾವೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತೇವೆ" ಎಂದು ಹೇಳಿದ ಪಾಂಡಿಯನ್, "ಹಿಂದು ಮತ್ತು ಮುಸ್ಲಿಮರನ್ನು ವಿಭಜಿಸುವ ಉದ್ದೇಶದಿಂದ ಅರ್ಧ ಮಾಹಿತಿಗಳನ್ನು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ. ಮೂಲ ದಾಖಲೆ ನನ್ನ ಬಳಿಯಿದೆ ಮತ್ತು ಅದನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲು ಅಥವಾ ಬಹಿರಂಗಗೊಳಿಸಲು ಸಾಧ್ಯವಿಲ್ಲ. ತಪ್ಪು ಉದ್ದೇಶಗಳೊಂದಿಗೆ ಭಾಗಶಃ ದಾಖಲೆಯನ್ನು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತಿದೆ. ಅಂತವರನ್ನು ಗುರುತಿಸಿ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು” ಎಂದರು.







