ಜೂ.10ರಿಂದ ಅಕ್ಟೋಬರ್ 31ರವರೆಗೆ ಮಾನ್ಸೂನ್ ರೈಲ್ವೆ ವೇಳಾಪಟ್ಟಿ ಪ್ರಕಟ
ಮಳೆಗಾಲದಲ್ಲಿ ಸುರಕ್ಷಿತ ಸಂಚಾರಕ್ಕೆ ಸಜ್ಜಾಗಿದೆ ಕೊಂಕಣ ರೈಲ್ವೆ

ಉಡುಪಿ, ಜೂ.4: ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ನಡೆದಿರುವ ಹೋರಾಟದ ನಡುವೆ ಕೊಂಕಣ ರೈಲ್ವೆಯು ಮಳೆಗಾಲದ ತನ್ನ ಸಂಚಾರಕ್ಕೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಕೋವಿಡ್‌ನ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಕೊಂಡು ಮಳೆಗಾಲದ ಸತತ ಮಳೆಯ ನಡುವೆ ಈ ಭಾಗದ ಜನತೆಗೆ ಸುಗಮ ಸಂಚಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಿಗಮ ಮಾಡಿಕೊಂಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಳೆಗಾಲದ ಸುಮಾರು ಮೂರು ತಿಂಗಳ ಅವಧಿಯಲ್ಲಿ ಕರಾವಳಿಯ ಕೊಂಕಣ ಭಾಗದಲ್ಲಿ ಭಾರೀ ಮಳೆ ಸುರಿಯುತ್ತದೆ. ಕೊಂಕಣ ರೈಲ್ವೆಯು ಈ ಭಾಗದಲ್ಲೇ ಹಾದು ಹೋಗುತ್ತದೆ. ಮಹಾರಾಷ್ಟ್ರದ ಕೊಲಾಡ್‌ನಿಂದ ಮಂಗಳೂರು ಸಮೀಪದ ತೋಕೂರುವರೆಗಿನ 740ಕಿ.ಮೀ. ದೂರವನ್ನು ಕೊಂಕಣ ರೈಲ್ವೆ ಒಳಗೊಂಡಿದೆ.
ಮಳೆಗಾಲದ ವೇಳೆ ಈ ಭಾಗದಲ್ಲಿ ಭೂಕುಸಿತ, ಗುಡ್ಡ ಕುಸಿತ, ಹಳಿಗಳ ಮೇಲೆ ಮರಗಳು ಉರುಳುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಹೀಗಾಗಿ ಕೊಲಾಡ್‌ನಿಂದ ತೋಕೂರುವರೆಗಿನ 740ಕಿ.ಮೀ. ಮಾರ್ಗದಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಬಿದ್ದ ನೀರು ಸರಾಗವಾಗಿ ಹರಿದುಹೋಗುವಂತೆ ಒಳಚರಂಡಿ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಲಾಗಿದೆ ಹಾಗೂ ನೀರು ಸರಾಗವಾಗಿ ಹರಿದು ಕೊಂಡು ಹೋಗುವಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ರೈಲ್ವೆ ಹಳಿಯ ಎರಡೂ ಬದಿಗಳಲ್ಲಿ ಮಣ್ಣು, ಬಂಡೆಕಲ್ಲು ಹಳಿಗಳ ಮೇಲೆ ಜಾರದಂತೆ, ಕೆಳಗಿನ ಮಣ್ಣು ಕುಸಿಯದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈಲುಗಳನ್ನು ಸುಗಮ ಸಂಚಾರವನ್ನು ಖಾತ್ರಿಗೊಳಿಸಲಾಗಿತ್ತು. ಇದರಿಂದ ಕಳೆದ ಎಂಟು ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬಂಡೆಗಳು ಹಳಿಗಳ ಮೇಲೆ ಜರಿದು ಬಿದ್ದು ರೈಲು ಸಂಚಾರ ಅಸ್ತವ್ಯಸ್ತಗೊಂಡ ಪ್ರಮುಖ ಘಟನೆಗಳು ನಡೆದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಸ್ತು ಸಿಬ್ಬಂದಿ ನೇಮಕ: ಈ ಮಾರ್ಗದಲ್ಲಿ ರೈಲುಗಳು ಸುರಕ್ಷಿತವಾಗಿ ಸಂಚರಿಸುವಂತೆ ನೋಡಿಕೊಳ್ಳಲು ಇರುವ ಮಾರ್ಗಸೂಚಿಯಂತೆ ಕೊಂಕಣ ರೈಲ್ವೆ ಮಳೆಗಾಲದ ಗಸ್ತು ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಗಸ್ತು ನಡೆಸುವುದಕ್ಕಾಗಿ 681 ಮಂದಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅಪಾಯ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಈ ಸಿಬ್ಬಂದಿಗಳು ದಿನದ 24 ಗಂಟೆ ಕಾಲವೂ ಗಸ್ತು ನಡೆಸಲಿದ್ದಾರೆ. ಅಲ್ಲದೇ ಇಂಥ ಸ್ಥಳಗಳನ್ನು ಗುರುತಿಸಿ 24ಗಂಟೆಯೂ ಕಾರ್ಯನಿರ್ವಹಿಸುವ ವಾಚ್‌ಮೆನ್ ಗಳನ್ನು ಸಹ ನೇಮಿಸಲಾಗಿದೆ.
ಮಳೆಗಾಲದಲ್ಲಿ ಭೂಕುಸಿತದಂಥ ಸಂಭವನೀಯ ಪ್ರದೇಶಗಳನ್ನು ಗುರುತಿಸಿ, ಅಂಥ ಪ್ರದೇಶಗಳಲ್ಲಿ ರೈಲಿನ ವೇಗವನ್ನು ಸಹ ನಿಯಂತ್ರಿಸಲಾಗು ವುದು. ಯಾವುದೇ ತುರ್ತು ಸಂದರ್ಭದಲ್ಲಿ ಬಳಸಲು ಸಾಧ್ಯವಾಗುವಂತೆ ಜೆಸಿಬಿ ಹಾಗೂ ಇತರ ಯಂತ್ರೋಪಕರಣಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.
ಕೊಂಕಣ ಭಾಗದಲ್ಲಿ ಭಾರೀ ಮಳೆ ಸುರಿಯುವಾಗ ಹಾಗೂ ಎದುರಿನ ಮಾರ್ಗ ಸರಿಯಾಗಿ ಕಾಣಿಸದಿದ್ದಾಗ ರೈಲಿನ ವೇಗವನ್ನು ಗಂಟೆಗೆ 40ಕಿ.ಮೀ.ಗೆ ಸೀಮಿತಗೊಳಿಸುವಂತೆ ರೈಲ್ವೆ ಚಾಲಕರಿಗೆ ಸೂಚನೆಗಳನ್ನು ನೀಡಲಾಗಿದೆ. ರತ್ನಗಿರಿ ಹಾಗೂ ಗೋವಾದ ವೆರ್ನಾಗಳಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ತುರ್ತು ವೈದ್ಯಕೀಯ ನೆರವು ಇರುವ ಎಆರ್‌ಎಂವಿ (ಆ್ಯಕ್ಸಿಡೆಂಟ್ ರಿಲೀಫ್ ಮೆಡಿಕಲ್ ವ್ಯಾನ್)ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಅಲ್ಲದೇ ವೆರ್ನಾದಲ್ಲಿ ಆರ್ಟ್ (ಆ್ಯಕ್ಸಿಡೆಂಟ್ ರಿಲೀಫ್ ಟ್ರೈನ್) ಒಂದನ್ನು ಇರಿಸಲಾಗಿದೆ. ಕೊಂಕಣ ರೈಲ್ವೆಯ ಸುರಕ್ಷತಾ ಸಿಬ್ಬಂದಿಗಳಿಗೆ ಮೊಬೈಲ್ ಫೋನ್‌ಗಳನ್ನು ಒದಗಿಸಲಾಗಿದೆ. ಇವರು ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕಚೇರಿ ಹಾಗೂ ನಿಲ್ದಾಣಗಳನ್ನು ಕೂಡಲೇ ಸಂಪರ್ಕಿಸುವಂತೆ ತಿಳಿಸಲಾಗಿದೆ. ರೈಲ್ವೆಯ ಚಾಲಕ ಹಾಗೂ ರೈಲುಗಳ ಗಾರ್ಡ್‌ಗಳಿಗೆ ವಾಕಿಟಾಕಿಗಳನ್ನು ನೀಡಲಾಗಿದೆ. ಇದರೊಂದಿಗೆ ಕೊಂಕಣ ರೈಲ್ವೆಯ ಎಲ್ಲಾ ನಿಲ್ದಾಣಗಳಲ್ಲಿ 25ವ್ಯಾಟ್‌ನ ವಿಎಚ್‌ಎಫ್‌ನ್ನು ಅಳವಡಿಸಲಾಗಿದೆ. ಇದರಿಂದ ರೈಲಿನ ಚಾಲಕ, ಸಿಬ್ಬಂದಿಗಳು ಹಾಗೂ ಸ್ಟೇಶನ್ ಮಾಸ್ಟರ್‌ಗಳ ನಡುವೆ ವೈಯರ್‌ಲೆಸ್ ಸಂಪರ್ಕ ಸಾಧ್ಯವಾಗಲಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಸರಾಸರಿ ಪ್ರತಿ ಒಂದು ಕಿ.ಮೀ. ಅಂತರದಲ್ಲಿ ತುರ್ತು ಸಂಪರ್ಕ ಸಾಧನ (ಇಎಂಸಿ)ವನ್ನು ಅಳವಡಿಸಿದ್ದು, ಇದರಿಂದ ಗಸ್ತುಪಡೆ, ವಾಚ್‌ಮನ್, ರೈಲು ಚಾಲಕ, ಗಾರ್ಡ್ ಹಾಗೂ ಇತರ ಸಿಬ್ಬಂದಿಗಳಿಗೆ ತುರ್ತ ಸಂದರ್ಭಗಳಲ್ಲಿ ಸ್ಟೇಶನ್ ಮಾಸ್ಟರ್ ರೊಂದಿಗೆ ನೇರ ಸಂಪರ್ಕ ಮಾಡಲು ಸಾಧ್ಯವಾಗುತ್ತದೆ. ಎಆರ್‌ಎಂವಿಯಲ್ಲಿ ತುರ್ತಾಗಿ ಸಂಪರ್ಕಕ್ಕೆ ಸೆಟಲೈಟ್ ಫೋನ್‌ಗಳನ್ನು ಸಹ ನೀಡಲಾಗಿದೆ.
ಮಾಂಗೋನ್, ಚಿಪ್ಳೂಣ್, ರತ್ನಗಿರಿ, ವಿಲ್ವಾಡೆ, ಕನಕವಲಿ, ಮಡಗಾಂವ್, ಕಾರವಾರ, ಭಟ್ಕಳ ಹಾಗೂ ಉಡುಪಿ ರೈಲು ನಿಲ್ದಾಣಗಳಲ್ಲಿ ಮಳೆ ಮಾಪನ ಯಂತ್ರವನ್ನು ಅಳವಡಿಸಲಾಗಿದೆ. ಇದು ಮಳೆಯ ಪ್ರಮಾಣವನ್ನು ದಾಖಲಿಸುವು ದಲ್ಲದೇ, ಮಳೆಯ ಪ್ರಮಾಣದಲ್ಲಿ ಹಠಾತ್ ಹೆಚ್ಚಳ ಕಂಡುಬಂದರೆ ಅಧಿಕಾರಿಗಳನ್ನು ಎಚ್ಚರಿಸುತ್ತದೆ.
ಇದರೊಂದಿಗೆ ಕಾಳಿ ನದಿ (ಮಂಗಳೂರು-ವೀರ್ ನಡುವೆ), ಸಾವಿತ್ರಿ ನದಿ (ವೀರ್-ಸಾಪೆ ವಮಾನೆ ನಡುವೆ) ಹಾಗೂ ವಶಿಷ್ಟ ನದಿ (ಚಿಪ್ಳುಣ್- ಕಮಾತೆ ನಡುವೆ) ಸೇತುವೆಗಳಲ್ಲಿ ಪ್ರವಾಹ ಎಚ್ಚರಿಕೆ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇವು ಅಧಿಕಾರಿಗಳಿಗೆ ಹಠಾತ್ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡಲಿವೆ. ಅದೇ ರೀತಿ ನಾಲ್ಕು ಕಡೆಗಳಲ್ಲಿ -ಪನ್ವೇಲ್, ಮಾಂಡೋವಿ ಸೇತುವೆ, ಝುವಾರಿ ಸೇತುವೆ ಹಾಗೂ ಶರಾವತಿ ಸೇತುವೆ- ಗಾಳಿಯ ವೇಗವನ್ನು ಅಳೆಯುವ ವಾಯುವೇಗ ಮಾಪಕಗಳನ್ನು ಅಳವಡಿಸಲಾಗಿದೆ.
ನಿಯಂತ್ರಣ ಕೊಠಡಿ: ಬೇಲಾಪುರ, ರತ್ನಗಿರಿ ಹಾಗೂ ಮಡಗಾಂವ್ ಗಳಲ್ಲಿರುವ ನಿಯಂತ್ರಣ ಕೊಠಡಿಗಳು ಮಳೆಗಾಲದ ಸಮಯದಲ್ಲಿ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿವೆ. ಮಳೆಗಾಲದ ರೈಲ್ವೆ ವೇಳಾ ಪಟ್ಟಿಯು ಜೂ.10ರಿಂದ ಕಾರ್ಯರೂಪಕ್ಕೆ ಬರಲಿದ್ದು, ಅಕ್ಟೋಬರ್ 31ರವರೆಗೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಮಾಹಿತಿಗಳಿಗಾಗಿ ರೈಲ್ವೆ ಪ್ರಯಾಣಿಕರು -www.konkanrailway.com - ಸಂಪರ್ಕಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ ಕರಾವಳಿ ಮೂಲಕ ಹಾದುಹೋದ ತೌಕ್ತೆ ಚಂಡಮಾರುತದ ಸಮಯದಲ್ಲಿ ಕೊಂಕಣ ರೈಲ್ವೆಯ ಸೇವೆಗಳು ಅಭಾದಿತವಾಗಿ ಕಾರ್ಯ ನಿರ್ವಹಿಸಿದ್ದವು. ಈ ವೇಳೆ ಪ್ರಬಲ ಚಂಡಮಾರುತ ಬೀಸಿ, ಭಾರೀ ಮಳೆ ಸುರಿದಿದ್ದರೂ ಕೊಂಕಣ ರೈಲ್ವೆ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲ. ಇದೇ ರೀತಿ ಮುಂದಿನ ಮಳೆಗಾಲದಲ್ಲೂ ಪ್ರಯಾಣಿಕರಿಗೆ ಸುಗಮ ಹಾಗೂ ಸುರಕ್ಷಿತ ಸಂಚಾರವನ್ನು ನಾವು ಖಾತ್ರಿ ಪಡಿಸುತ್ತೇವೆ ಎಂದು ಪ್ರಕಟಣೆ ತಿಳಿಸಿದೆ.







