ವೈದ್ಯರ ಕೊರತೆ: ಕರ್ನಾಟಕದಲ್ಲೂ ಬಳಕೆಯಾಗದೆ ಉಳಿದ ಪಿಎಂ ಕೇರ್ಸ್ ಅಡಿ ಸರಬರಾಜಾದ ವೆಂಟಿಲೇಟರ್ಗಳು; ವರದಿ

ಸಾಂದರ್ಭಿಕ ಚಿತ್ರ
ಬೆಂಗಳೂರು: ಸುಮಾರು ಎರಡು ತಿಂಗಳ ಹಿಂದೆ ಪಿಎಂ ಕೇರ್ಸ್ ಉಪಕ್ರಮದ ಅಡಿಯಲ್ಲಿ ಕೇಂದ್ರಸರಕಾರ ದಿಂದ ಕರ್ನಾಟಕ ರಾಜ್ಯಕ್ಕೆ ಸರಬರಾಜಾಗಿರುವ ವೆಂಟಿಲೇಟರ್ಗಳು ತಜ್ಞ ವೈದ್ಯರ ಕೊರತೆಯಿಂದಾಗಿ ಬಳಕೆಯಾಗದೆ ಉಳಿದಿದೆ ಎಂದು TIMES OF INDIA ವರದಿ ಮಾಡಿದೆ.
ವೆಂಟಿಲೇಟರ್ ಗಳು ಸರಬರಾಜಾದ ಬಳಿಕ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲ್ಲೂಕಿನಲ್ಲಿರುವ ಎಲ್ಲಾ ಆರು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (ಸಿಎಚ್ಸಿ) ಕ್ರಿಟಿಕಲ್ ಕೇರ್ ಯೂನಿಟ್ (ಸಿಸಿಯು)ಗಳನ್ನು ಆರಂಭಿಸಲಾಗಿತ್ತು.
ಈ ಸಿಸಿಯುಗಳನ್ನು ಸ್ಥಳೀಯ ರಾಜಕಾರಣಿಗಳು ವಿಶೇಷ ಪೂಜೆಗಳನ್ನು ನಡೆಸುವ ಮೂಲಕ ಅದ್ದೂರಿಯಾಗಿ ಉದ್ಘಾಟನೆ ಮಾಡಿದ್ದರು.
ಉದ್ಘಾಟನೆಯಾದ ನಂತರ ಈ ಘಟಕಗಳು ಬಳಕೆಯಾಗದೆ ಉಳಿದಿವೆ. ಕೋವಿಡ್ ಎರಡನೆ ಅಲೆಯ ಸಂದರ್ಭ ವೆಂಟಿಲೇಟರ್ ಹಾಸಿಗೆಗಳ ಬೇಡಿಕೆಯು ಹೆಚ್ಚಾಗಿದ್ದರೂ ಆಸ್ಪತ್ರೆಯ ಸಿಬ್ಬಂದಿ ಬಳಿ ವೆಂಟಿಲೇಟರ್ ಬೆಂಬಲಿತ ಹಾಸಿಗೆಗಳನ್ನು ನಿರ್ವಹಿಸುವ ಪರಿಣತಿಗಳಿಲ್ಲ ಎಂದು ವರದಿಯಾಗಿದೆ.
"ನಾವು ಇಲ್ಲಿ ಆರು ವೆಂಟಿಲೇಟರ್ಗಳನ್ನು ಹೊಂದಿದ್ದೇವೆ. ಆದರೆ ಅದರ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡಲು ಪರಿಣಿತ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ನಮ್ಮಲ್ಲಿಲ್ಲದ ಕಾರಣ ನಾವು ಅವುಗಳನ್ನು ಬಳಸಲು ಸಾಧ್ಯವಾಗಿಲ್ಲ. ಅಲ್ಲದೆ, ನಮ್ಮ ಸಿಬ್ಬಂದಿ ಪ್ರಸ್ತುತ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದಾರೆ’’ ಎಂದು ಮುಧೋಳ್ ನ ಹಿರಿಯ ವೈದ್ಯರೊಬ್ಬರು ಹೇಳಿದರು.
ವೆಂಟಿಲೇಟರ್ ಬೇಡಿಕೆ ಇದ್ದರೂ ಸಹ ಕರ್ನಾಟಕದ ಅನೇಕ ಗ್ರಾಮೀಣ ಆಸ್ಪತ್ರೆಗಳಲ್ಲಿ ಇದೇ ಸನ್ನಿವೇಶ ಕಂಡುಬರುತ್ತಿದೆ. ರಾಜ್ಯ ಸರಕಾರ ಮೊದಲ ಹಾಗೂ ಎರಡನೇ ಕೋವಿಡ್ ಅಲೆಯ ಸಂದರ್ಭ ಸುಮಾರು 2,900 ವೆಂಟಿಲೇಟರ್ಗಳನ್ನು ವಿವಿಧ ಸಿಎಚ್ಸಿ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ವಿತರಿಸಿತ್ತು. ಇದಲ್ಲದೆ, ಸಾಮಾಜಿಕ ಸಂಸ್ಥೆಗಳು ಹಾಗೂ ಕೆಲವು ಖಾಸಗಿ ಕಂಪನಿಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಮೂಲಕ ಗ್ರಾಮೀಣ ಪ್ರದೇಶದ ಸರಕಾರಿ ಆಸ್ಪತ್ರೆಗಳಿಗೆ ಅನೇಕ ವೆಂಟಿಲೇಟರ್ ಹಾಸಿಗೆಗಳನ್ನು ದಾನ ಮಾಡಿದ್ದವು.
ವೆಂಟಿಲೇಟರ್ಗಳನ್ನು ಸಾಂಪ್ರದಾಯಿಕವಾಗಿ ನಿರ್ಣಾಯಕ ಆರೈಕೆ ಔಷಧದಲ್ಲಿ ತಜ್ಞರು ಇಂಟೆನ್ಸಿವಿಸ್ಟ್ಗಳು ನಿರ್ವಹಿಸುತ್ತಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು TIMES OF INDIA ಗೆ ತಿಳಿಸಿದರು.
ಅರಿವಳಿಕೆ ತಜ್ಞರು, ಶ್ವಾಸಕೋಶ ಶಾಸ್ತ್ರಜ್ಞರು ಹಾಗೂ ನಿರ್ಣಾಯಕ ಆರೈಕೆ ಔಷಧದಲ್ಲಿ ಹೆಚ್ಚುವರಿ ತರಬೇತಿ ಹೊಂದಿರುವ ವೈದ್ಯರು ಸಹ ವೆಂಟಿಲೇಟರ್ಗಳನ್ನು ನಿರ್ವಹಿಸಲು ಹಾಗೂ ಐಸಿಯುಗಳಲ್ಲಿ ಅಭ್ಯಾಸ ಮಾಡಲು ಅರ್ಹರಾಗಿದ್ದಾರೆ.
ಸರಕಾರದ ನಿರ್ದೇಶನದಂತೆ, ಎಂಡಿ (ಮೆಡಿಸಿನ್) ಹಾಗೂ ಅರಿವಳಿಕೆ ತಜ್ಞರಂತಹ ತಜ್ಞ ವೈದ್ಯರು ಮಾತ್ರ ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಹುದು. ಪರಿಣಾಮವಾಗಿ, ನಮ್ಮಲ್ಲಿ ಗ್ರಾಮೀಣ ಆಸ್ಪತ್ರೆಗಳು ಹಾಗೂ ಇತರ ಸೌಲಭ್ಯಗಳಲ್ಲಿ ಪೂರ್ಣಕಾಲಿಕ ತಜ್ಞ ವೈದ್ಯರು ಇಲ್ಲ. ಆದರೆ ವೆಂಟಿಲೇಟರ್ಗಳನ್ನು ನಿರ್ವಹಿಸಲು ನಾವು ಖಾಸಗಿ ವೈದ್ಯರನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಧಾರವಾಡದ ವೈದ್ಯರೊಬ್ಬರು ಹೇಳಿದರು.
“ಬಡ ರೋಗಿಗಳು ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕಾರಣ. ಸಿಎಚ್ಸಿ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಹಾಸಿಗೆಗಳು ಹಾಗೂ ಐಸಿಯು ಹಾಸಿಗೆಗಳನ್ನು ಹುಡುಕುತ್ತಾ ಓಡುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಈಗಾಗಲೇ ತುಂಬಿವೆ. ಆಡಳಿತವು ಈ ವೆಂಟಿಲೇಟರ್ ಹಾಸಿಗೆಗಳನ್ನು ಕ್ರಿಯಾತ್ಮಕಗೊಳಿಸಬೇಕೆಂದು ಕಾಂಗ್ರೆಸ್ ನಾಯಕ ಮೋಹನ್ ಅಸುಂಡಿ ಒತ್ತಾಯಿಸಿದ್ದಾರೆ.







