ಮಂಗಳೂರು ವಿವಿ : ಬ್ಯಾರಿ ಇತಿಹಾಸದಲ್ಲಿ ಇಚ್ಲಂಗೋಡು ಹೆಜ್ಜೆ ಗುರುತು ಕುರಿತು ವೆಬಿನಾರ್
ಮಂಗಳೂರು, ಜೂ.4: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ‘ಬ್ಯಾರಿ ಇತಿಹಾಸದಲ್ಲಿ ಇಚ್ಲಂಗೋಡು ಹೆಜ್ಜೆ ಗುರುತು’ ಎಂಬ ವೆಬಿನಾರ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ಹಿರಿಯ ಸಾತಿಯಾಗಿ, ಬ್ಯಾರಿ ಸಂಶೋಧಕರಾಗಿ, ಪತ್ರಕರ್ತರಾಗಿ, ಪ್ರಾಧ್ಯಾಪಕರಾಗಿ ಇಚ್ಲಂಗೋಡು ಬ್ಯಾರಿ ಇತಿಹಾಸಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಬ್ಯಾರಿ ಕ್ಷೇತ್ರ ಕಾರ್ಯದಲ್ಲಿ ಆಳವಾದ ಅಧ್ಯಯನ ನಡೆಸಿದ್ದರು ಎಂದು ಹೇಳಿದರು.
ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಅನಸೂಯ ರೈ ಮಾತನಾಡಿ, ಇಚ್ಲಂಗೋಡು ಅವರದು ಸರಳ ವ್ಯಕ್ತಿತ್ವ, ಬ್ಯಾರಿ ಕ್ಷೇತ್ರದಲ್ಲಿ ಸಂಶೋಧನೆಯ ಜೊತೆಗೆ ಗ್ರಾಹಕ ಕಾನೂನನ್ನು ಅಧ್ಯಯನ ಮಾಡಿ ಗ್ರಾಹಕರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮಾಡಲು ಜನಸಾಮಾನ್ಯರಿಗೆ ಸಹಕರಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಮಾತನಾಡಿ ಸಾಹಿತ್ಯ ಕ್ಷೇತ್ರಕ್ಕೆ ಇಚ್ಲಂಗೋಡು ಸಾಕಷ್ಟು ಕೊಡುಗೆ ನೀಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಕತೆಗಳು, 250ಕ್ಕೂ ಅಧಿಕ ಕವನಗಳು, 25ರಷ್ಟು ಹಾಸ್ಯ ಲೇಖನಗಳು, 800ರಷ್ಟು ವೈಚಾರಿಕ ಲೇಖನಗಳನ್ನು ಬರೆದು ಅನೇಕ ಪ್ರಶಸ್ತಿ, ಬಿರುದು, ಸನ್ಮಾನ, ಗೌರವಕ್ಕೆ ಪಾತ್ರರಾಗಿದ್ದರು ಎಂದರು.
ಸಾಹಿತಿ ಶಂಶುದ್ದಿನ್ ಮಡಿಕೇರಿ ಮಾತನಾಡಿ ಇಚ್ಲಂಗೋಡು ರಚಿಸಿದ ವಿವಿಧ ಕೃತಿಗಳು, ಜನಪರ ಕಾಳಜಿಯ ಪುಸ್ತಕಗಳು ಹಾಗೂ ನಡೆಸಿದ ಅಧ್ಯಯನಗಳ ಬಗ್ಗೆ ಬೆಳಕು ಚೆಲ್ಲಿದರು.
ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ಅಹಮದ್ ಬಾವ ಮೊದಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ.ಎ.ಸಿದ್ದೀಕ್ ಸ್ವಾಗತಿಸಿದರು. ಅಧ್ಯಯನ ಪೀಠದ ವಿದ್ಯಾರ್ಥಿ ಸ್ವಯಂಸೇವಕಿ ಶಫೀಕಾ ವಂದಿಸಿದರು.







