ಚೆನ್ನೈ ಮೃಗಾಲಯದಲ್ಲಿ ಸಿಂಹಿಣಿ ಸತ್ತ ನಂತರ 9 ಸಿಂಹಗಳಿಗೆ ಕೋವಿಡ್ -19 ದೃಢ

ಚೆನ್ನೈ: ಚೆನ್ನೈನ ಹೊರವಲಯದಲ್ಲಿರುವ ವಂಡಲೂರು ಮೃಗಾಲಯದಲ್ಲಿ ಹೆಣ್ಣು ಸಿಂಹವೊಂದು ಗುರುವಾರ ಸಂಜೆ ಕೋವಿಡ್ -19 ಸೋಂಕಿನಿಂದ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ. ಮೇ 26 ರಂದು ವಂಡಲೂರಿನ ಅರಿಗ್ನಾರ್ ಅನ್ನಾ ಝೂಲಾಜಿಕಲ್ ಪಾರ್ಕ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೃಗಾಲಯದ ಸಫಾರಿ ಪಾರ್ಕ್ ಪ್ರದೇಶದಲ್ಲಿ ಐದು ಸಿಂಹಗಳನ್ನು ಇರಿಸಲಾಗಿದ್ದು, ಇವುಗಳಿಗೆ ಹಸಿವು ಕಡಿಮೆಯಾಗುವುದು ಹಾಗೂ ಕೆಲವೊಮ್ಮೆ ಕೆಮ್ಮು ಕಂಡುಬಂದಿದೆ ಎಂದು ವರದಿಯಾಗಿದೆ.
ಸಿಂಹಗಳನ್ನು ತಕ್ಷಣ ಮೃಗಾಲಯದ ಪಶುವೈದ್ಯಕೀಯ ತಂಡವು ಪರೀಕ್ಷೆ ಮಾಡಿತ್ತು ಮೃಗಾಲಯದ ಅಧಿಕಾರಿಗಳ ಕೋರಿಕೆಯ ಮೇರೆಗೆ, ಸಿಂಹಗಳ ಆರೋಗ್ಯ ಸ್ಥಿತಿಯನ್ನು ತನಿಖೆ ಮಾಡಲು ಮೃಗಾಲಯದಲ್ಲಿರುವ ಪಶುವೈದ್ಯರಿಗೆ ಸಹಾಯ ಮಾಡಲು ತಜ್ಞರ ತಂಡವನ್ನು ನಿಯೋಜಿಸಲಾಗಿದೆ.
11 ಸಿಂಹಗಳ ರಕ್ತದ ಮಾದರಿಗಳು, ಮೂಗಿನ ಸ್ವ್ಯಾಬ್, ಗುದನಾಳದ ಸ್ವ್ಯಾಬ್ ಹಾಗೂ ಮಲ ಮಾದರಿಗಳನ್ನು ಮಧ್ಯಪ್ರದೇಶದ ಭೋಪಾಲ್‌ನ ರಾಷ್ಟ್ರೀಯ ಉನ್ನತ ಭದ್ರತಾ ರೋಗಗಳ ಸಂಸ್ಥೆಗೆ (ಎನ್‌ಐಎಚ್‌ಎಸ್‌ಎಡಿ) ಕಳುಹಿಸಲಾಗಿದೆ ಹಾಗೂ 11 ಮಾದರಿಗಳಲ್ಲಿ 9 ಮಾದರಿಗಳು ಪಾಸಿಟಿವ್ ಆಗಿ ಮರಳಿದೆ.
ಮೃಗಾಲಯದ ಮತ್ತೊಂದು ಸ್ಥಳದಲ್ಲಿ ನೆಲೆಸಿದ್ದ ನೀಲಾ ಎಂಬ 9 ವರ್ಷದ ಸಿಂಹಿಣಿ ಜೂನ್ 3 ರಂದು ಮೃತಪಟ್ಟಿತ್ತು. ಸಿಂಹವು ರೋಗ ಲಕ್ಷಣರಹಿತ ವಾಗಿತ್ತು ಎಂದು ಹೇಳಲಾಗುತ್ತಿದೆ ಹಾಗೂ ಸಾಯುವ ಹಿಂದಿನ ದಿನವಷ್ಟೇ ರೋಗಲಕ್ಷಣ ಕಾಣಿಸಿದ ತಕ್ಷಣ ಚಿಕಿತ್ಸೆ ನೀಡಲಾಗಿತ್ತು.







