ಸರಕಾರ ಗ್ರಾಮೀಣ ಮಹಿಳೆಯರಿಗೆ ಆದ್ಯತೆ ನೀಡಲಿ: ಮಹಿಳಾ ಕಾಂಗ್ರೆಸ್ ಮನವಿ
ಮಂಗಳೂರು, ಜೂ.4: ಕೋವಿಡ್ ಲಸಿಕೆ ನೀಡುವಾಗ ಮಹಿಳೆಯರಿಗೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆದ್ಯತೆ ನೀಡುವಂತೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಲ್ಕೈದು ಗಂಟೆಗಳ ಕಾಲ ಸಾಲಲ್ಲಿ ನಿಂತರೂ ಕೋವಿಡ್ ಲಸಿಕೆ ಸಿಗುತ್ತಿಲ್ಲ. ಇದರಿಂದ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ತುಂಬಾ ಸಮಸ್ಯೆ ಆಗುತ್ತಿದೆ. ಗ್ರಾಮೀಣ ಪ್ರದೇಶ ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ದೂರದಲ್ಲಿರುವುದರಿಂದ ಲಸಿಕೆ ಪಡೆಯುವುದೇ ದೊಡ್ಡ ಸಮಸ್ಯೆಯಾಗಿದೆ. ಲಸಿಕೆ ಸಾಕಷ್ಟು ದಾಸ್ತನು ಕೂಡ ಇಲ್ಲ. ಅಲ್ಲದೆ ವಿದೇಶಕ್ಕೆ ಹೋಗುವವರಿಗೂ ಕೂಡ ಎರಡು ಡೋಸ್ ಲಸಿಕೆ ಮಾತ್ರವಲ್ಲದೆ ಸರ್ಟಿಫಿಕೆಟ್ ಸಕಾಲದಲ್ಲಿ ದೊರೆಯುವಂತಾ ಗಬೇಕು ಎಂದು ಹೇಳಿದರು.
ಕೊರೋನ ಪ್ಯಾಕೇಜ್ ನೀಡುವಾಗ ಮಹಿಳಾ ಕಾರ್ಮಿಕರಿಗೆ ಆದ್ಯತೆ ನೀಡಬೇಕು. ಅಲ್ಲದೆ ವಿಧವೆಯರು ಮತ್ತು ಮಂಗಳಮುಖಿಯರಿಗೆ ವಿಶೇಷ ಸೌಲಭ್ಯ ನೀಡಬೇಕು. ಫಾರ್ಮಸಿ ವಿದ್ಯಾರ್ಥಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಇದೀಗ ಕಾಲೇಜುಗಳಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳಿಗೆ ಎರಡನೇ ಡೋಸ್ ದೊರೆತ್ತಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು ಎಂದು ಶಾಲೆಟ್ ಪಿಂಟೋ ಆಗ್ರಹಿಸಿದರು.
ಒಂದು ದೇಶ, ಒಂದು ರೇಶನ್ ಕೇವಲ ಘೋಷಣೆಯಾಗಿ ಉಳಿದಿದೆ. ವಲಸೆ ಕಾರ್ಮಿಕರಿಗೆ ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯಗಳು ದೊರೆಯುತ್ತಿಲ್ಲ. ಪಡಿತರ ಅಂಗಡಿಗಳಿಗೆ ಹೆಚ್ಚಿನ ಆಹಾರ ಸಾಮಾಗ್ರಿ ದಾಸ್ತಾನು ನೀಡಬೇಕು ಮತ್ತು ಎಲ್ಲ ಕಾರ್ಮಿಕ ವರ್ಗದವರಿಗೆ ಪಡಿತರ ದೊರೆಯುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಕೊರೋನ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗ ದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು. ಗರ್ಭಿಣಿಯ ಕೋವಿಡ್ ಟೆಸ್ಟ್ ಬಗ್ಗೆ ಕೂಡ ಗೊಂದಲ ಇರಬಾರದು ಎಂದು ಶಾಲೆಟ್ ಪಿಂಟೋ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಜೆಸಿಂತಾ ಆಲ್ಫ್ರೆಡ್, ಪಕ್ಷದ ನಾಯಕಿಯರಾದ ಶೋಭಾ ಕೇಶವ, ನಮಿತಾ ಡಿ. ರಾವ್, ಸರಳಾ ಕರ್ಕೇರ, ಸಂಜನಾ ಚಲವಾದಿ, ವಿದ್ಯಾ, ಚಂದ್ರಕಲಾ ರಾವ್, ತನ್ವೀರ್ ಶಾ ಉಪಸ್ಥಿತರಿದ್ದರು.







