ಶಿಲ್ಪಾನಾಗ್ ಬೆಂಬಲಕ್ಕೆ ನಿಂತ ಪಾಲಿಕೆ ಸದಸ್ಯರು, ಸಿಬ್ಬಂದಿ ಮತ್ತು ಪೌರಕಾರ್ಮಿಕರು
ಪಾಲಿಕೆ ಆಯುಕ್ತರಾಗಿ ಮುಂದುವರಿಸುವಂತೆ ಅಭಿಯಾನ, ಪ್ರತಿಭಟನೆ

ಮೈಸೂರು,ಜೂ.4: ಮೈಸೂರು ಮಹಾನಗರ ಪಾಲಿಕೆ ಆಯಕ್ತರಾದ ಶಿಲ್ಪ ನಾಗ್ ಅವರ ರಾಜೀನಾಮೆ ಅಂಗೀಕರಿಸದಂತೆ ಒತ್ತಾಯಿಸಿ ಮೈಸೂರು ಕಾರ್ಪೋರೇಟರ್ ಗಳು, ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ಅವರ ಪರವಾಗಿ ಅಭಿಯಾನ ಆರಂಭಿಸಿ, ಪ್ರತಿಭಟನೆ ನಡೆಸಿದರು.
ನಗರಪಾಲಿಕೆ ಆವರಣದಲ್ಲಿ ಶುಕ್ರವಾರ ಪಾಲಿಕೆ ಸದಸ್ಯರುಗಳು, ಪೌರಕಾರ್ಮಿಕರು ಮತ್ತು ಸಿಬ್ಬಂದಿಗಳು ಪ್ರತ್ಯೇಕವಾಗಿ ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂಬ ಬ್ಯಾನರ್ ಹಿಡಿದು ತೊಲಗಲಿ ತೊಲಗಲಿ ಜಿಲ್ಲಾಧಿಕಾರಿಗಳು ತೊಲಗಲಿ, ಉಳಿಸಿ ಉಳಿಸಿ ಮೈಸೂರು ಉಳಿಸಿ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ ಆಯುಕ್ತೆ ಶಿಲ್ಪಾನಾಗ್ ಅವರ ಸೇವೆ ಮೈಸೂರು ನಗರಕ್ಕೆ ಬೇಕಾಗಿದ್ದು, ಅವರನ್ನು ಆಯುಕ್ತರಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಮತ್ತೊಂದೆಡೆ ಪಾಲಿಕೆ ಸಿಬ್ಬಂದಿಗಳು ಶಿಲ್ಪಾನಾಗ್ ಅವರ ಬ್ಯಾನರ್ ಗೆ ಸಹಿ ಸಂಗ್ರಹ ಮಾಡಿ ಇವರ ಬೆಂಬಲಕ್ಕೆ ನಿಂತರು.
ಇದೇ ವೇಳೆ ಹೆಸರು ಹೇಳಲಿಚ್ಚಿಸದ ಸಹಾಯಕ ಇಂಜಿನಿಯರ್ ಗಳಿಬ್ಬರು ಮಾತನಾಡಿ, ಇಂತಹ ಒಬ್ಬ ಒಳ್ಳೆಯ ಅಧಿಕಾರಿಗೆ ಕಿರುಕುಳ ನೀಡುವುದು ಸರಿಯಲ್ಲ. ಇವರ ವೈಯಕ್ತಿಕ ವಿಚಾರಗಳು ಏನೆ ಇರಲಿ. ಮೈಸೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಶಿಲ್ಪಾನಾಗ್ ಅವರು ಮುಂದುವರಿಯಬೇಕು. ಅವರು ಉನ್ನತ ಅಧಿಕಾರಿಯಿಂದ ಹಿಡಿದು ಪೌರಕಾರ್ಮಿಕರವರೆಗೂ ಒಂದೇ ರೀತಿ ಕಾಣುತ್ತಾರೆ. ಹಿರಿಯರು ಕಿರಿಯರು ಎನ್ನದೆ ಎಲ್ಲರನ್ನು ಒಟ್ಟಿಗೂಡಿಕೊಂಡು ಕೊರೋನ ನಿಯಂತ್ರಣ ಮಾಡುವಲ್ಲಿ ಕ್ರಮವಹಿಸಿದ್ದಾರೆ. ಹಾಗಾಗಿ ಅವರನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಮತ್ತೊಂದೆಡೆ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಮಾತನಾಡಿ, ಶಿಲ್ಪಾನಾಗ್ ಪಾಲಿಕೆ ಆಯುಕ್ತರಾಗಿ ಬಂದ ಮೇಲೆ ಪೌರಕಾರ್ಮಿಕರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಪೌರಕಾರ್ಮಿಕರು ಅಕಾಲಿಕ ಅಥವಾ ಕೊರೋನ ಸಂಬಂಧ ಮರಣ ಹೊಂದಿದರೆ ಅವರಿಗೆ ಪಾಲಿಕೆ ವತಿಯಿಂದ 5 ಲಕ್ಷ ರೂ.ಗಳನ್ನು ನೀಡಲು ಹಣವನ್ನು ಮೀಸಲಿಟ್ಟಿದ್ದಾರೆ. ಜೊತೆಗೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಪೌರಕಾರ್ಮಿಕರಿಗೆ ನೇರ ವೇತನ ನೀಡಲು ಮುಂದಾಗಿದ್ದಾರೆ. ಹಾಗಾಗಿ ಸಾಮಾಜಿಕ ಕಾಳಜಿ ಇಟ್ಟುಕೊಂಡು ಸೇವೆ ಸಲ್ಲಿಸುತ್ತಿರುವ ಇವರನ್ನು ಪಾಲಿಕೆ ಆಯುಕ್ತರಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೇಯರ್ ಅನ್ವರ್ ಬೇಗ್, ಮಾಜಿ ಮೇಯರ್ ಹಾಲಿ ಸದಸ್ಯರಾದ ಅಯೂಬ್ ಖಾನ್, ಆರಿಫ್ ಹುಸೇನ್, ಪುಷ್ಪಲತಾ ಜಗನ್ನಾಥ್, ಅಶ್ವಿನಿ ಅನಂತು, ಬಿ.ವಿ.ಮಂಜುನಾಥ್, ಪ್ರೇಮ ಶಂಕರೇಗೌಡ, ಕೆ.ವಿ.ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







