ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ನಿಯಂತ್ರಣಕ್ಕೆ ಆರ್‌ಬಿಐ ಸಲಹೆ

ಹೊಸದಿಲ್ಲಿ, ಜೂ.4: ಎರಡು ದಿನದ ಬಳಿಕ ಶುಕ್ರವಾರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳವಾಗಿದೆ. ಪೆಟ್ರೋಲ್ ದರ ಲೀಟರ್‌ಗೆ 27 ಪೈಸೆ, ಡೀಸೆಲ್ ದರ 28 ಪೈಸೆ ಹೆಚ್ಚಳವಾಗಿದೆ ಎಂದು ಪೆಟ್ರೋಲಿಯಂ ಉತ್ಪನ್ನ ಮಾರಾಟ ಸಂಸ್ಥೆಗಳು ಪ್ರಕಟಿಸಿವೆ. ಇದರೊಂದಿಗೆ ಮೇ 4ರಿಂದ ಜೂನ್ 4ರ ಅವಧಿಯಲ್ಲಿ ತೈಲೋತ್ಪನ್ನ ದರಗಳಲ್ಲಿ 18 ಬಾರಿ ಹೆಚ್ಚಳವಾದಂತಾಗಿದೆ.
ಮುಂಬೈಯಲ್ಲಿ 1 ಲೀ. ಪೆಟ್ರೋಲ್ ದರ 100.98 ರೂ., ಡೀಸೆಲ್ ಲೀಟರ್‌ಗೆ 92.99 ಪೈಸೆಗೆ ಏರಿದೆ. ತೈಲೋತ್ಪನ್ನಗಳ ಬೆಲೆಯೇರಿಕೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ನಿಯಂತ್ರಿಸಬೇಕು ಎಂದು ರಿಸರ್ವ್ ಬ್ಯಾಂಕ್ ಶುಕ್ರವಾರ ಸಲಹೆ ನೀಡಿದೆ.
ಪೆಟ್ರೋಲ್, ಡೀಸೆಲ್ ದರದ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುವ ಅಬಕಾರಿ ತೆರಿಗೆ, ಉಪತೆರಿಗೆ ಮತ್ತು ತೆರಿಗೆಯನ್ನು ಸಂಘಟಿತ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಆರ್‌ಬಿಐಯ ಅರ್ಥಿಕ ನೀತಿ ಸಮಿತಿ ಹೇಳಿದೆ. ಬೆಲೆಗಳಲ್ಲಿ ಏರಿಳಿತ ಹಣದುಬ್ಬರ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರಗಳು, ವಿಶೇಷವಾಗಿ ಕಚ್ಛಾತೈಲ ದರ ಏರಿಕೆಯಾಗುವ ಜೊತೆಗೆ, ಸಾಗಾಣಿಕೆ ವೆಚ್ಚವು ಹಣದುಬ್ಬರ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ದೇಶದಲ್ಲಿ ವಾಹನಗಳ ತೈಲೋತ್ಪನ್ನಗಳ ದರಗಳು ಅಂತರಾಷ್ಟೀಯ ಕಚ್ಛಾತೈಲ ದರ, ರೂಪಾಯಿ-ಡಾಲರ್ ವಿನಿಮಯ ದರವನ್ನು ಅವಲಂಬಿಸಿದೆ. ಜೊತೆಗೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲ್, ಡೀಸೆಲ್ ಮೇಲೆ ಮೌಲ್ಯವರ್ಧಿತ ತೆರಿಗೆ(ವ್ಯಾಟ್), ಅಬಕಾರಿ ತೆರಿಗೆಯನ್ನು ವಿಧಿಸುತ್ತವೆ. ಇದರ ಮೇಲೆ ಮಾರಾಟಗಾರರ ಕಮಿಷನ್ ಮತ್ತು ಸಾಗಾಣಿಕೆ ವೆಚ್ಚ ಸೇರುತ್ತದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಯಡಿ ತಂದಿಲ್ಲ.







