ಹಣದುಬ್ಬರವನ್ನು ವಿಪತ್ತು ಎಂದು ಹೇಳುವವರು ಆಹಾರ ಸೇವಿಸಬೇಡಿ, ಪೆಟ್ರೋಲ್ ಬಳಕೆ ನಿಲ್ಲಿಸಿ ಎಂದ ಬಿಜೆಪಿ ಶಾಸಕ

ಹೊಸದಿಲ್ಲಿ: ಹಣದುಬ್ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಕರೆಯುವವರು ಆಹಾರವನ್ನು ತಿನ್ನುವುದು ಹಾಗೂ ಪೆಟ್ರೋಲ್ ಬಳಸುವುದನ್ನು ನಿಲ್ಲಿಸಬೇಕು ಎಂದು ಛತ್ತೀಸ್‌ಗಢ ದ ಬಿಜೆಪಿ ಶಾಸಕ ಹಾಗೂ ಮಾಜಿ ರಾಜ್ಯ ಸಚಿವ ಬ್ರಿಜ್ ಮೋಹನ್ ಅಗ್ರವಾಲ್ ಹೇಳಿದ್ದಾರೆ. ಇದರೊಂದಿಗೆ ಅವರು ವಿವಾದವನ್ನು ಹುಟ್ಟುಹಾಕಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ಬಿಜೆಪಿ ಶಾಸಕನ ಹೇಳಿಕೆಯನ್ನು “ನಾಚಿಕೆಗೇಡು” ಎಂದು ಹೇಳಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ವಿರೋಧಿಸುವವರನ್ನು ದೇಶ ತೊರೆಯಿರಿ ಎಂದು ಹೇಳುವ ದಿನ ದೂರವಿಲ್ಲ ಎಂದಿದೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ರವಾಲ್, “ಹಣದುಬ್ಬರವು ರಾಷ್ಟ್ರೀಯ ವಿಪತ್ತು ಆಗಿದ್ದರೆ, ಹಾಗೆ ಹೇಳುವವರು ತಿನ್ನುವುದನ್ನು, ಕುಡಿಯುವುದನ್ನು ನಿಲ್ಲಿಸಬೇಕು ಎಂದು ನಾನು ಭಾವಿಸುತ್ತೇನೆ. ಅವರು ಆಹಾರವನ್ನು ತ್ಯಜಿಸಿ ಪೆಟ್ರೋಲ್ ಬಳಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
"ಕಾಂಗ್ರೆಸ್ಸಿಗರು ಹಾಗೂ ಕಾಂಗ್ರೆಸ್ ಗೆ ಮತ ಚಲಾಯಿಸಿದವರು ಹಾಗೆ ಮಾಡಿದರೆ, ಹಣದುಬ್ಬರವು ತಾನಾಗಿಯೇ ಕಡಿಮೆಯಾಗುತ್ತದೆ" ಎಂದು ಅವರು ಹೇಳಿದರು. ಶಾಸಕನ ಈ ರೀತಿಯ ಹೇಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ಬೆಲೆ ಏರಿಕೆಯ ಭಾರವನ್ನು ಅನುಭವಿಸುತ್ತಿರುವ ಜನರ ನೋವನ್ನು ಸಹ ಅರಿತುಕೊಳ್ಳುತ್ತಿಲ್ಲ ಎಂದು ಛತ್ತೀಸ್ ಗಢ ಕಾಂಗ್ರೆಸ್ ನ ಸಂವಹನ ವಿಭಾಗದ ಉಸ್ತುವಾರಿ ಶೈಲೇಶ್ ನಿತಿನ್ ತ್ರಿವೇದಿ ಹೇಳಿದ್ದಾರೆ.







