ನಿತ್ಯ 1 ಕೋಟಿ ಜನರಿಗೆ ಉಚಿತ ಲಸಿಕೆ ನೀಡಬೇಕು: ರಾಷ್ಟ್ರಪತಿಗೆ ರಾಜ್ಯ ಕಾಂಗ್ರೆಸ್ ಮನವಿ
ರಾಜ್ಯಪಾಲರನ್ನು ಭೇಟಿಯಾದ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ

Photo: Twitter.com/INCKarnataka
ಬೆಂಗಳೂರು, ಜೂ. 4: `ಬಿಜೆಪಿ ಸರಕಾರದ ಲಸಿಕಾ ನೀತಿ ಜನವಿರೋಧಿಯಾಗಿದ್ದು, ನಿತ್ಯ ಕನಿಷ್ಠ 1 ಕೋಟಿ ಜನರಿಗೆ ಉಚಿತ ಲಸಿಕೆ ನೀಡಬೇಕು. ಆಗ ಮಾತ್ರ 3 ತಿಂಗಳ ಅವಧಿಯಲ್ಲಿ ದೇಶದ ಜನರಿಗೆ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಲು ಸಾಧ್ಯ. ಇಲ್ಲದಿದ್ದರೆ ಮೂರು ವರ್ಷವಾದರೂ ಲಸಿಕೆ ನೀಡಲು ಆಗುವುದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದ ನಿಯೋಗ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು. ರಾಜ್ಯಪಾಲರ ಭೇಟಿಗೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, `ಘನತೆವೆತ್ತ ರಾಜ್ಯಪಾಲರನ್ನು ಇಂದು ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ನಮ್ಮ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ನಿತ್ಯ 1 ಕೋಟಿ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂಬುದು ನಮ್ಮ ಮನವಿ. ಈ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೆಗೆದುಕೊಳ್ಳಬೇಕು. ಸರಕಾರದ ಪ್ರಸ್ತುತ ಲಸಿಕಾ ನೀತಿ ಜನವಿರೋಧಿಯಾಗಿದ್ದು, ಸದ್ಯ ದಿನಕ್ಕೆ ಕೇವಲ 16 ಲಕ್ಷ ಜನರಿಗೆ ಮಾತ್ರ ನೀಡಲು ಸಾಧ್ಯವಾಗುತ್ತಿದೆ. ದಿನಕ್ಕೆ 1 ಕೋಟಿಯಂತೆ ನೀಡಿದರೆ ಮಾತ್ರ ದೇಶದ ಎಲ್ಲರಿಗೂ ಅಗತ್ಯ ಅವಧಿಯಲ್ಲಿ ಲಸಿಕೆ ನೀಡಲು ಸಾಧ್ಯ. ಇಲ್ಲವಾದರೆ 3 ವರ್ಷವಾದರೂ ಈ ಲಸಿಕೆ ಕಾರ್ಯಕ್ರಮ ಮುಗಿಯುವುದಿಲ್ಲ. ಸರಕಾರ ಪರಿಹಾರ ನೀಡುವುದು ಬೇರೆ ವಿಚಾರ. ಲಸಿಕೆ ಕೊಟ್ಟು ಜನರ ಜೀವ ಉಳಿಸಿ ಎಂದು ನಾವು ರಾಷ್ಟ್ರಪತಿಗಳ ಮೂಲಕ ಕೇಂದ್ರ ಸರಕಾರವನ್ನು ಬೇಡುತ್ತಿದ್ದೇವೆ. ನಮ್ಮ 100 ಕೋಟಿ ರೂ.ಯೋಜನೆಗೆ ಅನುಮತಿ ನೀಡಿ ಎಂದು ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ ಎಂದರು.
ರಾಜ್ಯದ ಪಾಲಿಗೆ ಐತಿಹಾಸಿಕ ದಿನ: ನಾವು ರಾಜಕಾರಣದಲ್ಲಿ ಕೆಲಸ ಮಾಡುತ್ತಿದ್ದೇವೆ. `ಜೀವ ಇದ್ದರೆ ಜೀವನ' ಎಂದು ಕಾಂಗ್ರೆಸ್ನ ಎಲ್ಲ ಶಾಸಕರು ಸೇರಿ 100 ಕೋಟಿ ರೂ. ಲಸಿಕೆ ಯೋಜನೆ ರೂಪಿಸಿದ್ದೇವೆ. ಕೊರೋನ ತಡೆಗಟ್ಟಲು, ಲಸಿಕೆ ನೀಡಲು ಸರಕಾರದಿಂದ ಸಾಧ್ಯವಾಗಿಲ್ಲ. ಅನೇಕರು ತಮ್ಮ ಹಣದಲ್ಲಿ ಆಹಾರ, ಆಂಬುಲೆನ್ಸ್, ಆಕ್ಸಿಜನ್ ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಲಸಿಕಾ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಎಂದು ನಾವು ಮನವಿ ಮಾಡಿದ್ದೆವು. ಆದರೆ, ಯಡಿಯೂರಪ್ಪನವರು ಅದಕ್ಕೆ ಆಸ್ಪದ ಕೊಡಲಿಲ್ಲ ಎಂದು ಹೇಳಿದರು.
ಅದು ನಮ್ಮ ದುಡ್ಡಲ್ಲ, ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಖರ್ಚು ಮಾಡಲು ಕೊಟ್ಟಿರುವ ದುಡ್ಡು. ಈಗ ಅಭಿವೃದ್ಧಿಗಿಂತ ಜನರ ಜೀವ ಮುಖ್ಯ. ಹೀಗಾಗಿ ನಾವು ಜನರಿಗೆ ಲಸಿಕೆ ನೀಡುತ್ತಿದ್ದೆವು. ಆದರೆ ನಮಗೆ ಅನುಮತಿ ನೀಡಲಿಲ್ಲ. ಕೇಂದ್ರ ಸರಕಾರವು ಬರೀ ಪ್ರಚಾರಕ್ಕೆ ಮಾತ್ರ ಕೇವಲ ಎರಡು ಕಂಪೆನಿಗಳಿಗೆ ಮಾತ್ರ ಲಸಿಕೆ ಉತ್ಪಾದನೆ ಅವಕಾಶ ನೀಡಿದೆ. ಇಂದು ರಾಜ್ಯದ ಹಾಗೂ ನನ್ನ ಪಾಲಿಗೆ ಅತ್ಯಂತ ಪವಿತ್ರ ದಿನ. ನಮ್ಮ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಇತರರು ತಮ್ಮ ಸ್ವಂತ ಹಣದಲ್ಲಿ ಸುಮಾರು 3 ಲಕ್ಷ ಲಸಿಕೆಯನ್ನು ಖರೀದಿಸಿ, ಜನರಿಗೆ ಕೊಡುತ್ತಿದ್ದಾರೆ. ಈಗಾಗಲೇ 60 ಸಾವಿರ ಲಸಿಕೆಗೆ ದುಡ್ಡು ಕಟ್ಟಿದ್ದು, ಅದರಲ್ಲಿ 10 ಸಾವಿರ ಲಸಿಕೆ ಬಂದಿದೆ. ಅದನ್ನು ಜನರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ನಾವು ಇವತ್ತು ಬೆಳಗ್ಗೆ ಉದ್ಘಾಟಿಸಿದ್ದೇವೆ. ನಾನು ಅಲ್ಲೇ ನನ್ನ ಎರಡನೇ ಡೋಸ್ ಲಸಿಕೆ ತೆಗೆದುಕೊಂಡು ಬಂದಿದ್ದೇನೆ' ಎಂದು ಶಿವಕುಮಾರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಹಿರಿಯ ಮುಖಂಡರಾದ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರರು ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಖುದ್ಧು ಭೇಟಿ ಮಾಡಿ ಮನವಿ ಸಲ್ಲಿಸಿತು.







