12-18 ವರ್ಗದವರ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಪರೀಕ್ಷಾ ಪ್ರಯೋಗಕ್ಕೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
ಮುಂಬೈ, ಜೂ.4: ಕೊವ್ಯಾಕ್ಸಿನ್ ಲಸಿಕೆಯ ಪ್ರಯೋಗಾರ್ಥ ಪರೀಕ್ಷೆಯನ್ನು 12ರಿಂದ 18 ವರ್ಷದ ಮಕ್ಕಳ ಮೇಲೆ ನಡೆಸಲು ಅನುಮತಿ ಕೋರಿ ಬೃಹನ್ಮುಂಬಯಿ ನಗರಪಾಲಿಕೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ ಎಂದು ನಗರಪಾಲಿಕೆ ಹೆಚ್ಚುವರಿ ಆಯುಕ್ತ ಸುರೇಶ್ ಕಕಾನಿ ಶುಕ್ರವಾರ ಹೇಳಿದ್ದಾರೆ.
ಪರೀಕ್ಷಾ ಪ್ರಯೋಗ ನಡೆಸುವ ಬಗ್ಗೆ ಭಾರತ್ ಬಯೊಟೆಕ್ ಸಂಸ್ಥೆ ಆಸಕ್ತಿ ತೋರಿ ಪತ್ರ ಬರೆದ ಹಿನ್ನೆಲೆಯಲ್ಲಿ ಕೇಂದ್ರದಿಂದ ಅನುಮತಿ ಕೋರಲಾಗಿದೆ. ಪರೀಕ್ಷೆ ನಡೆಸಲು 2 ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಆಸಕ್ತಿ ತೋರಿವೆ. ಐಸಿಎಂಆರ್‌ನ ಮಾರ್ಗಸೂಚಿಯ ಪ್ರಕಾರ ಪರೀಕ್ಷಾ ಪ್ರಯೋಗ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಈ ಮಧ್ಯೆ, ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪಾಟ್ನಾದ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಪರೀಕ್ಷಾ ಪ್ರಯೋಗ ಪ್ರಕ್ರಿಯೆ ಆರಂಭವಾಗಿದೆ ಎಂದು ವರದಿಯಾಗಿದೆ. 2ರಿಂದ 18 ವರ್ಷದವರ ಮೇಲೆ ಕೊವ್ಯಾಕ್ಸಿನ್ ಲಸಿಕೆಯ 2 ಮತ್ತು 3ನೇ ಹಂತದ ಪ್ರಯೋಗಾರ್ಥ ಪರೀಕ್ಷೆಗೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದ್ದಾರೆ.