ಮೇಘಾಲಯ ಗಣಿ ದುರಂತ: ರಕ್ಷಣಾ ಕಾರ್ಯಾಚರಣೆಗೆ ಮಳೆಯಿಂದ ತಡೆ

ಫೈಲ್ ಫೋಟೊ PTI
ಶಿಲಾಂಗ್, ಜೂ.4: ಮೇಘಾಲಯದಲ್ಲಿ ಮೇ 30ರಂದು ನಡೆದ ಕಲ್ಲಿದ್ದಲು ಗಣಿ ದುರಂತದಲ್ಲಿ ಒಳಗೆ ಸಿಲುಕಿಕೊಂಡ ಕನಿಷ್ಟ 5 ಕಾರ್ಮಿಕರನ್ನು ಸುರಕ್ಷಿತವಾಗಿ ಪಾರುಮಾಡುವ ಕಾರ್ಯಾಚರಣೆಗೆ ನಿರಂತರ ಸುರಿಯತ್ತಿರುವ ಮಳೆ ಅಡ್ಡಿಯಾಗಿದೆ.
5 ದಿನದ ಕಾರ್ಯಾಚರಣೆಯ ಬಳಿಕವೂ ಗಣಿಯೊಳಗೆ ಯಾವುದೇ ಕಾರ್ಮಿಕರನ್ನು ಪತ್ತೆಹಚ್ಚಲಾಗಿಲ್ಲ ಎಂದು ಮೂಲಗಳು ಹೇಳಿವೆ. ಗಣಿಯಲ್ಲಿ ಡೈನಮೈಟ್ ಸ್ಫೋಟದಿಂದ ಮಣ್ಣು ಕುಸಿದ ಜೊತೆಗೆ, ಹೊರಗಿಂದ ಒಮ್ಮೆಲೇ ಗಣಿಯೊಳಗೆ ನೀರು ನುಗ್ಗಿ ಬಂದಿದೆ. 500 ಅಡಿ ಆಳವಿರುವ ಗಣಿಯಲ್ಲಿ ಸುಮಾರು 150 ಅಡಿಯಷ್ಟು ನೀರಿನಿಂದ ತುಂಬಿಹೋಗಿದೆ. ಇದಕ್ಕೆ ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆ ನೀರೂ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ದಳದವರು 3 ಪಂಪ್ ಬಳಸಿ ನೀರನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕ್ರೇನ್ಗೆ ಕಟ್ಟಲಾದ ಕಬ್ಬಿಣದ ಬಕೆಟ್ನಲ್ಲಿ ಕುಳಿತು ಗಣಿಯೊಳಗೆ ಇಳಿದು ಪರಿಸ್ಥಿತಿಯ ಅವಲೋಕನ ನಡೆಸಲಾಗಿದೆ. ಆದರೆ ಇದುವರೆಗೆ ಯಾವುದೇ ಕಾರ್ಮಿಕರ ಕುರುಹು ಪತ್ತೆಯಾಗಿಲ್ಲ. ಕಲ್ಲಿದ್ದಲು ಅಗೆಯಲು ಗಣಿಯೊಳಗೆ ಅಡ್ಡವಾಗಿ ಕೊರೆಯಲಾದ ಸಣ್ಣ ಹೊಂಡದಲ್ಲಿ ಇವರು ಸಿಲುಕಿರುವ ಸಾಧ್ಯತೆಯಿದೆ ಎಂದು ಈಸ್ಟ್ ಜೈಂಟಿಯಾ ಹಿಲ್ಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಇ ಖರ್ಮಾಲ್ಕಿ ಹೇಳಿದ್ದಾರೆ.
ಕಲ್ಲಿದ್ದಲು ಗಣಿ ಮಾಲಿಕ ಶಿನಿಂಗ್ ಲ್ಯಾಂಗ್ಸ್ಟ್ಯಾಂಗ್ ಪೊಲೀಸರಿಗೆ ಶರಣಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಮೇಘಾಲಯ ಗೃಹಸಚಿವ ಲಖ್ಮೆನ್ ರುಂಬ್ಯು ಹೇಳಿದ್ದಾರೆ. ಪೊಲೀಸರು ಇದುವರೆಗೆ 5 ಜನರನ್ನು ಪ್ರಶ್ನಿಸಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಗಣಿಯಲ್ಲಿ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ನಿಝಾಮುದ್ದೀನ್ ಆಲಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಲುಕ್ಔಟ್ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಗಪಾಲ್ ಸಿಂಗ್ ಧನೋವಾ ಹೇಳಿದ್ದಾರೆ. ಘಟನೆಯಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತಿ್ರ ಕೊನ್ರಾಡ್ ಕೆ ಸಂಗ್ಮಾ ಹೇಳಿದ್ದಾರೆ.