ವುಹಾನ್ ಪ್ರಯೋಗಾಲಯ ಕೆಲಸಗಾರರ ವೈದ್ಯಕೀಯ ದಾಖಲೆ ಬಿಡುಗಡೆ ಮಾಡಿ: ಚೀನಾಕ್ಕೆ ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಕರೆ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಜೂ. 4: ವುಹಾನ್ನ ಜೈವಿಕ ಪ್ರಯೋಗಾಲಯದಲ್ಲಿ ಕೆಲಸ ಮಾಡಿರುವ ಒಂಬತ್ತು ಮಂದಿಯ ವೈದ್ಯಕೀಯ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆ್ಯಂಟನಿ ಫೌಚಿ ಚೀನಾಕ್ಕೆ ಕರೆ ನೀಡಿದ್ದಾರೆ. ಈ ಪ್ರಯೋಗಾಲಯದಿಂದ ಸೋರಿಕೆಯಾಗಿರುವ ವೈರಸ್ನಿಂದಾಗಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹುಟ್ಟಿಕೊಂಡಿತೆ ಎಂಬ ಬಗ್ಗೆ ಅವರ ಕಾಯಿಲೆಗಳು ಮಹತ್ವದ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ‘ಫೈನಾನ್ಶಿಯಲ್ ಟೈಮ್ಸ್’ ಗುರುವಾರ ವರದಿ ಮಾಡಿದೆ.
‘‘2019ರಲ್ಲಿ ಕಾಯಿಲೆಗೆ ಒಳಗಾಗಿರುವರೆಂದು ವರದಿಯಾಗಿರುವ ಮೂವರು ವ್ಯಕ್ತಿಗಳ ವೈದ್ಯಕೀಯ ದಾಖಲೆಗಳನ್ನು ನಾನು ನೋಡಬಯಸುತ್ತೇನೆ. ಅವರು ನಿಜವಾಗಿಯೂ ಕಾಯಿಲೆಗೆ ಒಳಗಾಗಿದ್ದಾರೆಯೇ? ಹಾಗಿದ್ದರೆ, ಅವರಿಗೆ ಯಾವ ಕಾಯಿಲೆಯಿತ್ತು?’’ ಎಂದು ಫೌಚಿ ಕೇಳಿರುವುದಾಗಿ ವರದಿ ಹೇಳಿದೆ.
ಕೋವಿಡ್-19ಕ್ಕೆ ಕಾರಣವಾಗಿರುವ ವೈರಸ್ ಎಲ್ಲಿ ಹುಟ್ಟಿಕೊಂಡಿತು ಎಂಬ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ. ವುಹಾನ್ನಲ್ಲಿರುವ ವೈರಸ್ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದ ಸಂಶೋಧಕರು 2019ರಲ್ಲಿ ಮೊದಲ ಕೋವಿಡ್-19 ಪ್ರಕರಣಗಳು ವರದಿಯಾದ ಒಂದು ತಿಂಗಳ ಮೊದಲು ಗಂಭೀರ ಕಾಯಿಲೆಗೆ ಒಳಗಾಗಿದ್ದರು ಎಂಬ ವರದಿಗಳನ್ನು ಅಮೆರಿಕದ ಗುಪ್ತಚರ ಸಂಸ್ಥೆಗಳು ಪರಿಶೀಲಿಸುತ್ತಿವೆ.
ಆದರೆ, ವೈರಸ್ ಪ್ರಯೋಗಾಲಯದಿಂದ ಹೊರಬಿದ್ದಿದೆ ಎಂಬ ಆರೋಪವನ್ನು ಚೀನಾದ ವಿಜ್ಞಾನಿಗಳು ಮತ್ತು ಅಧಿಕಾರಿಗಳು ನಿರಾಕರಿಸಿದ್ದಾರೆ. ವೈರಸ್ ವುಹಾನ್ಗೆ ಬರುವ ಮೊದಲು ಇತರ ವಲಯಗಳಲ್ಲಿ ಹರಡಿರಬಹುದು ಹಾಗೂ ಆಮದಿತ ಶೀತಲೀಕೃತ ಆಹಾರ ಸರಕುಗಳ ಮೂಲಕ ಚೀನಾಕ್ಕೆ ಬಂದಿರಬಹುದು ಅಥವಾ ಕಾಡುಪ್ರಾಣಿಗಳ ಮಾರುಕಟ್ಟೆಯಿಂದ ಬಂದಿರಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಾರೆ.
ಆದರೆ, ವೈರಸ್ ಮೊದಲು ಪ್ರಾಣಿಗಳ ಮೂಲಕ ಮಾನವರಿಗೆ ಬಂದಿದೆ ಎಂಬುದಾಗಿ ಫೌಚಿ ಈಗಲೂ ಭಾವಿಸುತ್ತಾರೆ ಎಂದು ‘ಫೈನಾನ್ಶಿಯಲ್ ಟೈಮ್ಸ್’ ಹೇಳಿದೆ.







