ನವಾಲ್ನಿ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಮಸೂದೆಗೆ ಪುಟಿನ್ ಸಹಿ

ಮಾಸ್ಕೋ (ರಶ್ಯ), ಜೂ. 4: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಮತ್ತು ಅವರ ಮಿತ್ರರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲು ಬಳಸಲಾಗುತ್ತದೆ ಎಂದು ನಿರೀಕ್ಷಿಸಲಾಗಿರುವ ಕಾನೂನಿಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಸಹಿ ಹಾಕಿದ್ದಾರೆ.
‘ತೀವ್ರವಾದಿ’ ಗುಂಪುಗಳ ಸಿಬ್ಬಂದಿ, ಸದಸ್ಯರು ಮತ್ತು ಪ್ರಾಯೋಜಕರು ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಮಸೂದೆಗೆ ಪುಟಿನ್ ಸಹಿ ಹಾಕುವುದನ್ನು ರಶ್ಯದ ಕಾನೂನು ಮಾಹಿತಿ ವೆಬ್‌ಸೈಟ್ ತೋರಿಸಿದೆ.
ರಶ್ಯ ಸಂಸತ್ತಿನ ಕೆಳಮನೆ ಸ್ಟೇಟ್ ಡ್ಯೂಮಕ್ಕೆ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ, ದೇಶದ ಪ್ರತಿಪಕ್ಷಗಳ ಮೇಲೆ ನಿರ್ಬಂಧಗಳನ್ನು ಹೇರುವ ಸರಣಿ ಕ್ರಮಗಳ ಭಾಗವಾಗಿ ಈ ಮಸೂದೆಯನ್ನು ತರಲಾಗಿದೆ ಎಂಬುದಾಗಿ ಟೀಕಾಕಾರರು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಈ ಮಸೂದೆಯನ್ನು ಸಂಸತ್‌ನ ಮೇಲ್ಮನೆ ಫೆಡರೇಶನ್ ಕೌನ್ಸಿಲ್ ಭಾರೀ ಬಹುಮತದಿಂದ ಅಂಗೀಕರಿಸಿದೆ.
ನವಾಲ್ನಿಯ ರಾಜಕೀಯ ಸಂಘಟನೆಯನ್ನು ತೀವ್ರವಾದಿ ಸಂಘಟನೆ ಎಂಬುದಾಗಿ ಘೋಷಿಸಬೇಕೇ ಎನ್ನುವುದನ್ನು ಮುಂದಿನ ವಾರ ರಶ್ಯದ ನ್ಯಾಯಾಲಯವೊಂದು ನಿರ್ಧರಿಸಲಿದೆ.





