53 ಸಾವಿರ ವಲಸೆ ಕಾರ್ಮಿಕರು ಉತ್ತರಾಖಂಡಕ್ಕೆ ವಾಪಾಸ್

ಸಾಂದರ್ಭಿಕ ಚಿತ್ರ (Photo: PTI)
ಡೆಹ್ರಾಡೂನ್: ದೇಶದ ವಿವಿಧೆಡೆ ಕೋವಿಡ್-19 ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದ ಸುಮಾರು 53 ಸಾವಿರ ಮಂದಿ ವಲಸೆ ಕಾರ್ಮಿಕರು ಉತ್ತರಾಖಂಡಕ್ಕೆ ವಾಪಸ್ಸಾಗಿದ್ದಾರೆ ಎಂದು ಉತ್ತರಾಖಂಡ ವಲಸೆ ಆಯೋಗ, ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
"ಒಟ್ಟು 53,092 ವಲಸೆ ಕಾರ್ಮಿಕರು 2021ರ ಏಪ್ರಿಲ್ ಒಂದರಿಂದ ಮೇ 5ರ ಒಳಗೆ ಉತ್ತರಾಖಂಡಕ್ಕೆ ವಾಪಸ್ಸಾಗಿದ್ದಾರೆ. ಅಲ್ಮೋರಾದಲ್ಲಿ ಗರಿಷ್ಠ ಅಂದರೆ ಶೇಕಡ 27.97ರಷ್ಟು ಮಂದಿ ವಾಪಸ್ಸಾಗಿದ್ದಾರೆ. ಪೌರಿ (17.84%), ತೆಹ್ರಿ (12.53%), ಉಧಂಸಿಂಗ್ ನಗರ (0.66), ಡೆಹ್ರಾಡೂನ್ (0.289), ಹರಿದ್ವಾರ (ಶೇ. 0.11) ನಂತರದ ಸ್ಥಾನಗಳಲ್ಲಿವೆ ಎಂದು ವಲಸೆ ಆಯೋಗದ ಉಪಾಧ್ಯಕ್ಷ ಎಸ್.ಎಸ್.ನೇಗಿ ಹೇಳಿಕೆ ನೀಡಿದ್ದಾರೆ.
ವಾಪಸ್ಸಾಗಿರುವ ಬಹುತೇಕ ವಲಸೆ ಕಾರ್ಮಿಕರು ಎರಡನೇ ಅಲೆಯ ತೀವ್ರತೆಯಿಂದಾಗಿ ಹೇರಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡವರು. ಕನಿಷ್ಠ 39.4% ಮಂದಿ ಆತಿಥ್ಯ ಉದ್ಯಮದವರು. ಉಳಿದಂತೆ ವಿದ್ಯಾರ್ಥಿಗಳು (12.9%) ಮತ್ತು ಕೂಲಿಕಾರ್ಮಿಕರು (11.1%) ಕೂಡಾ ಗಣನೀಯ ಪ್ರಮಾಣದಲ್ಲಿ ವಾಪಸ್ಸಾಗಿದ್ದಾರೆ ಎಂದು ವಿವರಿಸಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣವನ್ನು ಅಂದಾಜಿಸುವ ಸಲುವಾಗಿ ಈ ವರದಿ ಸಿದ್ಧಪಡಿಸುವಂತೆ ಸರ್ಕಾರ, ಆಯೋಗಕ್ಕೆ ಸೂಚಿಸಿತ್ತು.
ಕಳೆದ ವರ್ಷ ಸೆಪ್ಟೆಂಬರ್ 2020ರವರೆಗೆ ರಾಜ್ಯಕ್ಕೆ 3.57 ಲಕ್ಷ ವಲಸೆ ಕಾರ್ಮಿಕರು ವಾಪಸ್ಸಾಗಿದ್ದರು. ಕಳೆದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ, ಮರಳಿ ಬಂದ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ಮುಖ್ಯಮಂತ್ರಿ ಸ್ವರೋಜ್ ಗಾರ್ ಯೋಜನೆಯನ್ನು ಆರಂಭಿಸಿತ್ತು.