ದಿಲ್ಲಿಯಲ್ಲಿ ಸಮ-ಬೆಸ ನಿಯಮದ ಆಧಾರದಲ್ಲಿ ಮಾಲ್, ಮಾರುಕಟ್ಟೆಗಳನ್ನು ತೆರೆಯಲು ನಿರ್ಧಾರ
ಹೊಸದಿಲ್ಲಿ: ದಿಲ್ಲಿಯ 'ಅನ್ ಲಾಕ್' ಯೋಜನೆಗೆ ಪ್ರೋತ್ಸಾಹ ನೀಡುವ ಭಾಗವಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನಗರದ ಮಾರುಕಟ್ಟೆಗಳನ್ನು ಸಮ-ಬೆಸ ನಿಯಮದ ಆಧಾರದಲ್ಲಿ ತೆರೆಯಲು ಅನುಮತಿಸಲಾಗುವುದು ಎಂದು ಘೋಷಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ನಿವಾರಿಸಲು ಸಮ-ಬೆಸ ನಿಯಮ ವನ್ನು ಜಾರಿಗೊಳಿಸಲಾಗಿತ್ತು.
ಅಂಗಡಿಗಳನ್ನು ಪ್ರತಿದಿನ ತೆರೆಯಲು ಅನುಮತಿಸಲಾಗುತ್ತದೆ. ಮಾಲ್ ಗಳು ಹಾಗೂ ಶಾಪಿಂಗ್ ಸೆಂಟರ್ ಗಳು ಸಮ-ಬೆಸ ಆಧಾರದಲ್ಲಿ ತೆರೆಯಲ್ಪಡುತ್ತವೆ.
ದೆಹಲಿ ಮೆಟ್ರೊ ಕೂಡ ಮತ್ತೆ ತನ್ನ ಓಟವನ್ನು ಪ್ರಾರಂಭಿಸಲಿದೆ. ಆದರೆ ಕೇವಲ 50 ಪ್ರತಿಶತದಷ್ಟು ಆಸನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಖಾಸಗಿ ಕಚೇರಿಗಳನ್ನು ಶೇಕಡಾ 50 ರಷ್ಟು ಉದ್ಯೋಗಗಳ ಮಿತಿಯೊಂದಿಗೆ ತೆರೆಯಬಹುದಾಗಿದೆ.
ಅಗತ್ಯವಸ್ತುಗಳ ಅಂಗಡಿಗಳು ಎಲ್ಲ ದಿನಗಳಲ್ಲಿ ತೆರೆಯಬಹುದು. ಸಮ-ಬೆಸ ನಿಯಮವು ಇದಕ್ಕೆ ಅನ್ವಯಿಸುವುದಿಲ್ಲ.ಪರಿಸ್ಥಿತಿ ಇನ್ನಷ್ಟು ಸುಧಾರಿಸಿದರೆ ಹೆಚ್ಚಿನ ಸಡಿಲಿಕೆ ಘೋಷಿಸಲಾಗುತ್ತದೆ ಎಂದು ಕೇಜ್ರಿವಾಲ್ ತಿಳಿಸಿದರು
ನಾಗರಿಕರ ಸಲಹೆಗಳು ಹಾಗೂ ತಜ್ಞರ ಅಭಿಪ್ರಾಯಗಳ ಆಧಾರದ ಮೇಲೆ ಆಡಳಿತವು ಹಂತಹಂತವಾಗಿ ಲಾಕ್ ಡೌನ್ ತೆರೆಯುತ್ತದೆ ಎಂದು ಕಳೆದ ವಾರ ಕೇಜ್ರಿವಾಲ್ ಅವರು ಘೋಷಿಸಿದ್ದರು.